ನ್ಯೂಸ್ ನಾಟೌಟ್ : 69ನೇ ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಕನ್ನಡ ಚಿತ್ರರಂಗದ ಹಾಗೂ ತುಳುನಾಡಿನ ರಕ್ಷಿತ್ ಶೆಟ್ಟಿ ಅವರ ‘ಚಾರ್ಲಿ 777’ ಸಿನಿಮಾ ಉತ್ತಮ ಕನ್ನಡ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 11 ಸದಸ್ಯರಿದ್ದ ತೀರ್ಪುಗಾರರ ಮುಖ್ಯಸ್ಥ ಚಲನಚಿತ್ರ ನಿರ್ದೇಶಕ ಕೇತನ್ ಮೆಹ್ತಾ 2021ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿರೋದು ಹೆಮ್ಮೆಯ ವಿಚಾರ.
ಇನ್ನು ಈ ಚಿತ್ರದ ನಿರ್ದೇಶನ ಮಾಡಿವರು ಸುಳ್ಯದವರು ಅನ್ನೋದು ಹೆಮ್ಮೆಯ ವಿಚಾರ. ಕಿರಣ್ ರಾಜ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಈ ಸಿನಿಮಾವು ದಾಖಲೆಯನ್ನೇ ಮಾಡಿದೆ.ತೆರೆ ಮೇಲೆ ಮೂಡಿ ಬಂದ ಎಮೋಷನಲ್ ಕಥಾ ಹಂದರ ಹೊಂದಿದ್ದ ಚಿತ್ರ ಪ್ರೇಕ್ಷಕರ ಮನಮುಟ್ಟುವಂತಿತ್ತು.ಥಿಯೇಟರ್ಗೆ ಬಂದಿದ್ದ ಸಿನಿಮಾಭಿಮಾನಿಗಳು ಕಣ್ಣೀರು ಹರಿಸುತ್ತಲೇ ಹೊರಗೆ ಬಂದಿದ್ದರು.ಇದೀಗ ಆವತ್ತು ರಿಲೀಸ್ ಆಗಿದ್ದ ಸಿನಿಮಾವನ್ನು ಇವತ್ತು ಮತ್ತೊಮ್ಮೆ ನೆನಪಿಸುವಂತೆ ಮಾಡಿದ್ದಾರೆ.ಅದಕ್ಕೆ ಕಾರಣ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಿರೋದು.
ಸ್ವತಃ ಶ್ವಾನ ಪ್ರೇಮಿ ಆಗಿರುವ ಕಿರಣ್ರಾಜ್, ಶ್ವಾನವನ್ನೇ ಮುಖ್ಯವಾಗಿಟ್ಟುಕೊಂಡು ಕಥೆ ಮಾಡಿದ್ದರು. ಚಾರ್ಲಿ(ಶ್ವಾನ)ಯನ್ನು ನಟಿಸುವಂತೆ ಮಾಡಿದ್ದರು. ಚಾರ್ಲಿಯ ಅತ್ಯದ್ಭುತ ಎಂಬಂತಹ ಎಮೋಷನ್ಸ್ ಕ್ಯಾಪ್ಚರ್ ಮಾಡಿರುವ ಕಿರಣ್ರಾಜ್ ಮತ್ತು ತಂಡದ ತಾಳ್ಮೆಗೆ ಭಾರಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಕಿರಣ್ರಾಜ್ ಬರೆದಿರುವುದು ಸರಳವಾದ ಕಥೆಯಾದರೂ ಹಾರ್ಟ್ ಟಚ್ಚಿಂಗ್ ಆಗಿತ್ತು. ಚಿತ್ರಕಥೆ ಕೂಡ ಭಾರಿ ತಿರುವುಗಳನ್ನೇನೂ ಹೊಂದಿಲ್ಲವೆಂದಾದರೂ ಅದನ್ನು ತೆರೆಮೇಲೆ ಇಳಿಸಿರುವ ರೀತಿ ಅಮೋಘವೆಂಬಂತಿತ್ತು ಎಂದು ಚಿತ್ರ ಪ್ರೇಮಿಗಳು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.
ಧರ್ಮನಿಗೆ (ರಕ್ಷಿತ್ ಶೆಟ್ಟಿ) ಅಪ್ಪ-ಅಮ್ಮ ಯಾರೂ ಇಲ್ಲ. ಆತ ಅನಾಥನಾಗುವುದಕ್ಕೂ ಒಂದು ಕಾರಣ ಇದೆ. ಶಿಸ್ತಿನ ಬದುಕು ಅವನದ್ದಲ್ಲ.ಯಂತ್ರಗಳ ಜೊತೆಗೆ ಕೆಲಸ ಮಾಡುವ ಅವನದ್ದು ಒಂಥರಾ ಯಾಂತ್ರಿಕ ಬದುಕು. 10 ವರ್ಷಗಳಾದ್ರೂ ಅವನ ಮನೆ ಕ್ಯಾಲೆಂಡರ್ ಬದಲಾಗಿರುವುದಿಲ್ಲ.ಪುಟ್ಟ ಮಕ್ಕಳ ಬಾಯಲ್ಲಿ ಹಿಟ್ಲರ್ ಎಂದರೆ ಕರೆಸಿಕೊಳ್ಳುವ, ಅಕ್ಕ ಪಕ್ಕದ ಮನೆಯವರನ್ನು ಕಂಡರೆ ನೋಟದಲ್ಲೇ ಕೆಂಡಕಾರುವ ಧರ್ಮನ ಬದುಕಿಗೆ ಚಾರ್ಲಿ (ಶ್ವಾನ) ಪ್ರವೇಶ ನೀಡುತ್ತಾಳೆ.ಅಲ್ಲಿಂದ ಆತನ ಬದುಕಿನ ಹಾದಿಯೇ ಸುಗಮವಾಗುತ್ತದೆ. ಸೂತಕದ ಮನೆಯಂತಿದ್ದ ಧರ್ಮನ ಬದುಕಿನಲ್ಲಿ ಸಂಭ್ರಮ ನೆಲೆಸುತ್ತದೆ. ಆದರೆ ಅಷ್ಟರಲ್ಲೇ ಒಂದು ದೊಡ್ಡ ತಿರುವಿನ ಹಾದಿಗೆ ಧರ್ಮ ಮತ್ತು ಚಾರ್ಲಿ ಬಂದು ನಿಂತಿರುತ್ತಾರೆ. ಆ ತಿರುವು ಏನು ಅನ್ನೋದೇ ‘777 ಚಾರ್ಲಿ’ಯ ಕಥೆ.
ಸಂಭಾಷಣೆಯ ಸಾಥ್ನೊಂದಿಗೆ, ಅರವಿಂದ್ ಕಶ್ಯಪ್ರ ಛಾಯಾಗ್ರಹಣದ ಸೊಗಸಿನೊಂದಿಗೆ ಹಾಗೂ ನೋಬಿನ್ ಪೌಲ್ರ ಅತ್ಯದ್ಭುತ ಹಿನ್ನೆಲೆ ಸಂಗೀತ ಸಹಾಯದೊಂದಿಗೆ ತೆರೆಮೇಲೆ ಚಾರ್ಲಿಯ ಎಮೋಷನಲ್ ಜರ್ನಿಯನ್ನು ಸೃಷ್ಟಿಸುವಲ್ಲಿ ಕಿರಣ್ರಾಜ್ ಗೆದ್ದಿದ್ದಾರೆ..! ಚಿತ್ರದಲ್ಲಿರುವ ಡಾಗ್ ಶೋ ಸೀನ್ ನೋಡುಗರಿಗೆ, ಅದರಲ್ಲೂ ಶ್ವಾನ ಪ್ರೇಮಿಗಳಿಗೆ ಖುಷಿಯಿಂದ ಕಣ್ಣೀರು ಹಾಕುವಂತೆ ಮಾಡುತ್ತದೆ. ಕೊನೆ ಕೊನೆಗೆ ನಿಜಕ್ಕೂ ದುಃಖದಿಂದಲೇ ಕಣ್ಣೀರು ಬರುವಂತಹ ದೃಶ್ಯಗಳನ್ನು ಜೋಡಿಸಿದ್ದಾರೆ ಕಿರಣ್ರಾಜ್. ಇದೀಗ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿರೋದು ತುಂಬಾ ಖುಷಿ ಕೋಡೋ ವಿಚಾರ.
ಚಾರ್ಲಿ 777 ಚಿತ್ರದ ನಿರ್ದೇಶಕ ಕಿರಣ್ ರಾಜ್ ಅವರು ಸುಳ್ಯ ಕೇರ್ಪಳದ ದಿ. ಅಚ್ಚುತ ಮಣಿಯಾಣಿ ಹಾಗೂ ಶ್ರೀಮತಿ ಗೋದಾವರಿ ದಂಪತಿಯ ಹಿರಿಯ ಪುತ್ರ.ಸದ್ಯ ಕಿರಣ್ ರಾಜ್ ಅವರು ಮಂಗಳೂರಿನಲ್ಲಿ ನೆಲೆಸಿದ್ದಾರೆ.