ನ್ಯೂಸ್ ನಾಟೌಟ್ : ಮಡಿಕೇರಿಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿನಿಯರು ಮಲ್ಪೆ ಸಮುದ್ರ ತೀರದಲ್ಲಿ ನೀರು ಪಾಲಾಗಿರುವ ಆಘಾತಕಾರಿ ಸುದ್ದಿ ಇದೀಗ ಬೆಳಕಿಗೆ ಬಂದಿದೆ.ಇದರಲ್ಲಿ ಒಬ್ಬಾಕೆಯನ್ನು ರಕ್ಷಣೆ ಮಾಡಲಾಗಿದ್ದು,ಮತ್ತೊಬ್ಬಳು ಮೃತಪಟ್ಟಿದ್ದಾಳೆ ಎನ್ನುವ ವಿಚಾರ ತಿಳಿದು ಬಂದಿದೆ.
ಈ ಬಾಲಕಿಯರು ಮೂರು ದಿನಗಳ ಹಿಂದೆ ಮಡಿಕೇರಿಯಿಂದ ನಾಪತ್ತೆಯಾಗಿದ್ದರು (Girls from Madikeri) ಎಂದು ತಿಳಿದುಬಂದಿದೆ. ಆದರೆ, ಇಲ್ಲಿಗೆ ಹೇಗೆ ಬಂದರು ಎನ್ನುವ ಪ್ರಶ್ನೆ ಬುಗಿಲೆದ್ದಿದೆ. ಸಮುದ್ರಕ್ಕೆ ಹಾರಿದರೇ? ಅಥವಾ ಆಕಸ್ಮಿಕವಾಗಿ ನೀರುಪಾಲಾದರೇ (Missing Girls) ಎಂಬ ಅಂಶ ಇನ್ನೂ ಸ್ಪಷ್ಟವಾಗಿ ತಿಲಿದು ಬಂದಿಲ್ಲ.
ಇಬ್ಬರು ಮಡಿಕೇರಿಯ ಖಾಸಗಿ ಕಾಲೇಜೊಂದರ ಪ್ರಥಮ ಪಿಯಸಿ ವಿದ್ಯಾರ್ಥಿನಿಯರು. ಮಾನ್ಯ ಮತ್ತು ಯಶಸ್ವಿನಿ ಇಬ್ಬರು ಸಮುದ್ರದಲ್ಲಿ ನೀರುಪಾಲಾದವರು.ಆದರೆ ಇಬ್ಬರಲ್ಲಿ ಒಬ್ಬಾಕೆ ಬಚಾವ್ ಆಗಿದ್ದಾಳೆ. ಮಾನ್ಯ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಕ್ಕಿ ಮೃತಪಟ್ಟರೆ, ನೀರಿನಲ್ಲಿ ಮುಳುಗೇಳುತ್ತಿದ್ದ ಯಶಸ್ವಿನಿಯನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚೇತರಿಸಿಕೊಂಡಿದ್ದಾಳೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು ಮಲ್ಪೆ ತೀರದಲ್ಲಿ ಇಬ್ಬರು ಹೆಣ್ಣು ಮಕ್ಕಳು ನೀರಿನಲ್ಲಿ ಮುಳುಗೇಳುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಸಮಾಜಸೇವಕ, ಆಪತ್ಬಾಂಧವ ಈಶ್ವರ ಮಲ್ಪೆ ಅವರು ಧಾವಿಸಿದ್ದರು. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನೂ ಮೇಲೆತ್ತಿ ಹಾಕಿದರು. ಆದರೆ, ಅಷ್ಟು ಹೊತ್ತಿಗೇ ಮಾನ್ಯ ಉಸಿರು ಚೆಲ್ಲಿದ್ದಳು. ಮತ್ತೊಬ್ಬಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಯಶಸ್ವಿನಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ನಾವಿಬ್ಬರೂ ಮೂರು ದಿನಗಳ ಹಿಂದೆ ಮನೆ ಬಿಟ್ಟು ಬಂದಿದ್ದು,ಗೊತ್ತಾಗದೇ ಇಲ್ಲಿಗೆ ಬಂದಿದ್ದೇವೆ ಎಂದಿದ್ದಾಳೆ.ಇಬ್ಬರೂ ಪ್ರಥಮ ಪಿಯುಸಿ ವಿಜ್ಞಾನ (ಪಿಸಿಎಂ) ವಿದ್ಯಾರ್ಥಿಗಳಾಗಿರುವ ಇವರು ಆಪ್ತ ಗೆಳತಿಯರು.ಇವರಲ್ಲಿ ಯಶಸ್ವಿನಿ ಮನೆ ಬಿಟ್ಟು ಹೊರಟಾಗ ಮಾನ್ಯ ಕೂಡಾ ಆಕೆಗೆ ಸಾಥ್ ನೀಡಿದ್ದಾಳೆ ಎಂಬುದು ಪ್ರಾಥಮಿಕ ಮಾಹಿತಿ.ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬರಬೇಕಾದರೆ ಇನ್ನೂ ಆ ಬಗ್ಗೆ ವಿಚಾರಬೇಕಾಗಿದೆ.ಆದರೆ ನಾಪತ್ತೆಯಾದ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿತ್ತು. ಅದರ ನಡುವೆಯೇ ಇದೀಗ ಈ ದುರಂತ ಸಂಭವಿಸಿದ್ದು ಖೇದಕರ ಸಂಗತಿ.
ಮಾಹಿತಿ ಪ್ರಕಾರ ಮಡಿಕೇರಿಯಿಂದ ಮಂಗಳೂರಿಗೆ ಬಂದು ಅಲ್ಲಿಂದ ಮುಂದಿನ ದಾರಿ ಕಾಣದೆ ಮಲ್ಪೆ ತೀರಕ್ಕೆ ಬಂದಿದ್ದಾರೆ. ಅಲ್ಲಿ ಕುಳಿತಿದ್ದಾಗ ಕಡಲ ಅಲೆಗಳಿಗೆ ಸಿಲುಕಿದ್ದಾರೆ ಎನ್ನುವುದು ಸದ್ಯದ ಮಾಹಿತಿ. ಈ ಹಿನ್ನಲೆ ಮಡಿಕೇರಿ ಪೊಲೀಸ್ ಠಾಣೆಯಲ್ಲಿ ಈ ಇಬ್ಬರು ಕಾಣೆಯಾಗಿರುವ ದೂರು ದಾಖಲಾಗಿದೆ.
ಇವರಿಬ್ಬರೂ ಸುಮಾರು 12 ಹಾಗೂ14 ವರ್ಷದ ಅಂತರ ಪ್ರಾಯದ ಮಕ್ಕಳಾಗಿದ್ದು ಈ ಬಗ್ಗೆ ಆತಂಕ ವ್ಯಕ್ತವಾಗಿದೆ.ಇವರು ಮನೆ ಬಿಟ್ಟು ಬಂದಿದ್ದಾರೆ ಅಂತಾದರೆ ಯಾವ ಕಾರಣಕ್ಕಾಗಿ ಮನೆ ಬಿಟ್ಟು ಬಂದಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.ಈ ಬೆನ್ನಲ್ಲೇ ಮಡಿಕೇರಿ ಭಾಗದಲ್ಲಿ ಮಕ್ಕಳು ಮನೆ ಬಿಟ್ಟು ಹೋಗಿ ಕಣ್ಮರೆಯಾಗುವ ಹಲವಾರು ಘಟನೆಗಳು ನಡೆದಿದೆ ಎನ್ನುವ ವಿಚಾರ ಕೂಡ ಭಾರಿ ಚರ್ಚೆಯಲ್ಲಿರುವಾಗಲೇ ಯಾಕೆ ಈ ರೀತಿ ಆಗಿದೆ ಎನ್ನುವ ಬಗ್ಗೆ ಸಂದೇಹ ಮೂಡಿ ಬಂದಿದೆ. ಇನ್ನು ನಾಪತ್ತೆಯಾದವರು ಹೆಚ್ಚಿನವರು ಮರಳಿ ಪತ್ತೆಯಾಗಿಲ್ಲ ಎನ್ನುವುದು ಕೂಡ ಬೇಸರದ ಸಂಗತಿಯಾಗಿದೆ.
ಕೊಡಗಿನಲ್ಲಿ ಹೆಣ್ಣು ಮಕ್ಕಳ ಕಾಣೆ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೆ ಕಳೆದ ಜುಲೈ 23ರಂದು ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಸಿದ್ದಾಪುರ ವ್ಯಾಪ್ತಿ ಕೂಲಿ ಕಾರ್ಮಿಕ ಕುಟುಂಬದ ನಾಲ್ವರು ಬಾಲಕಿಯರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.ಇವರಲ್ಲಿ ಇಬ್ಬರನ್ನು ಅವರ ಪೋಷಕರು ಶಾಲೆಗೆ ಹೋಗಲೆಂದು ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದಿದ್ದರು. ಅವರು ಮರಳಿ ಮನೆಗೆ ಬಂದಿರಲಿಲ್ಲ. ಇನ್ನಿಬ್ಬರು ಮಕ್ಕಳು ಅಜ್ಜಿ ಮನೆಗೆಂದು ಹೋದವರು ಅಲ್ಲಿಗೂ ಹೋಗದೆ ಮರಳಿಯೂ ಬಾರದೆ ಕಣ್ಮರೆಯಾಗಿದ್ದರು ಎಂದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ನೋಡೋದಾದ್ರೆ, ಇಬ್ಬರು ಹೆಣ್ಣು ಮಕ್ಕಳು ಮನೆ ಬಿಟ್ಟು ಬಂದಿದ್ದೇಕೆ? ಮಲ್ಪೆಗೆ ಬಂದಿದ್ದು ಹೇಗೆ? ಮಕ್ಕಳು ಈ ರೀತಿಯಾಗಿ ಮನೆ ಬಿಟ್ಟು ಹೋಗುವ ಪರಿಸ್ಥಿತಿಯಲ್ಲಿ ಯಾಕೆ ನಾಪತ್ತೆಯಾಗುತ್ತಿದ್ದಾರೆ.ಇದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕಾಗಿದೆ.ಇದರ ಹಿಂದೆ ಬೇರೆ ಜಾಲಗಳು ಕೆಲಸ ಮಾಡಿವೆಯೇ? ಎನ್ನುವ ಕೋನದಲ್ಲಿಯೂ ತನಿಖೆಯಾಗಬೇಕಾಗಿದೆ.