ನ್ಯೂಸ್ ನಾಟೌಟ್: ಸೆಪ್ಟಂಬರ್ 3ರಂದು ಬೆಳ್ತಂಗಡಿಯಲ್ಲಿ ಸೌಜನ್ಯ ಪರ ನ್ಯಾಯಕ್ಕಾಗಿ ಬೃಹತ್ ಸಮಾವೇಶ ನಡೆಯಲಿದೆ. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿ, ಸೆಪ್ಟಂಬರ್ 3ರ ಸಭೆ ಜನರ ತೀರ್ಮಾನವನ್ನು ಸತ್ಯ ಎಂದು ತೋರಿಸಲು ಮಾಡುವ ಹೋರಾಟವಾಗಿದೆ. ಈ ಹೋರಾಟದಲ್ಲಿ ಯಾರನ್ನೂ ಯಾರು ಬನ್ನಿ ಎಂದು ನಾವು ಹೇಳುವುದಿಲ್ಲ. ಯಾರಿಗೂ ಇಲ್ಲಿಗೆ ಬರುವುದಕ್ಕೆ ಒತ್ತಡವಿಲ್ಲ. ಬಸ್ಸಿನ ವ್ಯವಸ್ಥೆ, ದುಡ್ಡಿನ ವ್ಯವಸ್ಥೆಯೂ ಇಲ್ಲ. ಸ್ವ ಇಚ್ಛೆಯಲ್ಲಿ ಈ ಸತ್ಯದ ಹೋರಾಟದಲ್ಲಿ ಬಂದು ಭಾಗವಹಿಸಬೇಕು ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ನಾವು ಯಾರಿಗೂ ಅಂಗಡಿಗಳನ್ನು ಬಂದ್ ಮಾಡಿ ಎಂದು ಹೇಳುವುದಿಲ್ಲ. ಒಂದು ಪ್ರಕರಣಕ್ಕೆ ನ್ಯಾಯ ಸಿಗುವುದಕ್ಕೆ 11 ವರ್ಷ ಬೇಕೆ..? ತಕ್ಷಣ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಕೊಡಬೇಕು. ಸೌಜನ್ಯಳಿಗೆ ನ್ಯಾಯ ಕೊಡಿಸಬೇಕು ಅನ್ನುವುದು ನಮ್ಮ ಒತ್ತಾಯವಾಗಿದೆ ಎಂದು ತಿಳಿಸಿದರು.
ಸೌಜನ್ಯ ಹತ್ಯೆಯಾಗಿ ಹನ್ನೊಂದು ವರ್ಷ ಕಳೆದಿದೆ. ಅಪರಾಧಿ ಎಂದು ಸೆರೆ ಹಿಡಿಯಲಾಗಿದ್ದ ಸಂತೋಷ್ ರಾವ್ ನಿರಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಈ ಬೆನ್ನಲ್ಲೆ ನಿಜವಾದ ಅಪರಾಧಿಗಳನ್ನು ಹಿಡಿಯಿರಿ. ಅವರಿಗೆ ಶಿಕ್ಷೆ ವಿಧಿಸಿ ಅನ್ನುವ ಕೂಗು ಹೆಚ್ಚುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿಕೊಂಡ ಪ್ರತಿಭಟನೆಯ ಕಾವು ಇದೀಗ ರಾಜ್ಯ ವ್ಯಾಪಿ ವಿಸ್ತರಿಸುತ್ತಿದೆ. ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಸೌಜನ್ಯ ಪರ ನ್ಯಾಯದ ಕೂಗು ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಮುಂಬೈನಲ್ಲೂ ಸೌಜನ್ಯ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಸೌಜನ್ಯ ನ್ಯಾಯದ ಪರ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಭಾರಿ ದೊಡ್ಡ ಪ್ರತಿಭಟನೆ ನಡೆದಿತ್ತು. ಇದಕ್ಕೆ ಸ್ವತಃ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಸೌಜನ್ಯ ತಾಯಿ ಕುಸುಮಾವತಿ, ಕುಟುಂಬಸ್ಥರು ಭಾಗಿಯಾಗಿದ್ದರು. ನಿಂತಿಕಲ್ಲಿನಿಂದ ವಾಹನ ಜಾಥಾ ಆರಂಭವಾಗಿತ್ತು. ಸುಳ್ಯದ ಜ್ಯೋತಿ ಸರ್ಕಲ್ ನಿಂದ ಕಾಲ್ನಡಿಗೆ ಜಾಥಾ ನಡೆದಿತ್ತು. ಸುಮಾರು ಎಂಟು ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.