ನ್ಯೂಸ್ ನಾಟೌಟ್: ಭವಿಷ್ಯದ ವೈದ್ಯರನ್ನು ತಯಾರು ಮಾಡುವ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಮೆಡಿಕಲ್ ಕಾಲೇಜಿನ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರಿಗೆ ಕಾಮುಕರ ಕಾಟ ಎದುರಾಗಿದೆ. ಯಾವುದೇ ಭಯವಿಲ್ಲದೆ ಕತ್ತಲಲ್ಲಿ ಹುಡುಗಿಯರ ಹಾಸ್ಟೇಲ್ ಗೆ ನುಗ್ಗುವ ಕಾಮುಕರು ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ. ಇದರಿಂದ ರೊಚ್ಚಿಗೆದ್ದ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ.
ಕೊಡಗಿನ ಸುಂದರ ಪರಿಸರದ ಅತ್ಯಂತ ಎತ್ತರದ ಪ್ರದೇಶದಲ್ಲಿ ಭವ್ಯವಾಗಿ ತಲೆ ಎತ್ತಿರುವ ಮೆಡಿಕಲ್ ಕಾಲೇಜಿನ ಕ್ಯಾಂಪಸ್ ನೋಡುವುದೇ ಒಂದು ಖುಷಿ. ಅಲ್ಲಿನ ಕ್ಯಾಂಪಸ್ ನಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡಿದ್ದ ವಿದ್ಯಾರ್ಥಿನಿಯರಿಗೆ ಬಹುದೊಡ್ಡ ತಲೆನೋವು ಎದುರಾಗಿದೆ. ರಾತ್ರಿಯಾದರೆ ಸಾಕು ಎಲ್ಲಿಯೂ ಓಡಾಟ ನಡೆಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು, ತಡರಾತ್ರಿ ಮೆಡಿಕಲ್ ಕಾಲೇಜಿನಲ್ಲಿರುವ ಲೇಡಿಸ್ ಹಾಸ್ಟೇಲ್ ಎದುರು ಬೈಕ್ ನಲ್ಲಿ ಬಂದು ಕಾಮುಕರು ಯುವತಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಲೇಡಿಸ್ ಹಾಸ್ಟೇಲ್ ಎದುರೇ ಬಿಂದಾಸ್ ಓಡಾಟ ಮಾಡುತ್ತಿದ್ದಾರೆ. ಇಷ್ಟು ಸಾಲದು ಅನ್ನುವಂತೆ ವಿದ್ಯಾರ್ಥಿನಿಯರನ್ನು ಕಂಡಾಗ ಬಟ್ಟೆ ಬಿಚ್ಚಿ ಅಸಭ್ಯ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಈ ದೃಶ್ಯಾವಳಿಗಳು ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯಿಂದ ಮಡಿಕೇರಿ ಹೊರವಲಯದ ಕರ್ಣಂಗೇರಿಯಲ್ಲಿರುವ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯರು ವಿಚಲಿತಗೊಂಡಿದ್ದಾರೆ. ಮಾತ್ರವಲ್ಲ ಘಟನೆಯನ್ನು ಖಂಡಿಸಿ ತರಗತಿ ಬಹಿಷ್ಕರಿಸಿದ್ದಾರೆ. ಕೂಡಲೇ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ತರಗತಿಯಿಂದ ಹೊರಗಡೆ ಬಂದು ಪ್ರತಿಭಟಿಸಿದ್ದಾರೆ. ಮಾತ್ರವಲ್ಲ ಕಾಲೇಜಿಗೆ ಭದ್ರತೆ ಕೊಡಬೇಕು. ಮುಖ್ಯದ್ವಾರಕ್ಕೆ ಗೇಟ್ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದೀಗ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ವಿದ್ಯಾರ್ಥಿನಿಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ನಡೆದಿದ್ದರೂ ಕಾಲೇಜು ಆಡಳಿತ ಮಂಡಳಿ ಮೌನ ವಹಿಸಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇಂತಹ ಪುಂಡರ, ಕಾಮುಕರ ಹಾವಳಿಯನ್ನು ಕೊಡಗಿನ ಜನ ಕಟು ಪದಗಳಿಂದ ಟೀಕಿಸಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಜನ ಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲೇಬೇಕೆಂದು ಆಗ್ರಹಿಸಿದ್ದಾರೆ. ಮೂಲಗಳ ಪ್ರಕಾರ ಪೊಲೀಸರು ಇದೀಗ ಸಿಸಿಟಿವಿ ದೃಶ್ಯಾವಳಿಯ ಆಧಾರದಿಂದ ಕಾಮುಕರನ್ನು ಬಂಧಿಸುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ದಿನಗಳ ಹಿಂದೆ ವಿದ್ಯಾರ್ಥಿನಿಯರ ಹಾಸ್ಟೆಲ್ ಮುಂದೆ ಕಾಮುಕನೊಬ್ಬ ಅಶ್ಲೀಲವಾಗಿ ನಡೆದುಕೊಂಡಿದ್ದ.
ವಿಷಯ ತಿಳಿದ ಕೆಲವು ವಿದ್ಯಾರ್ಥಿಗಳು ಅವನನ್ನು ಬೆನ್ನಟ್ಟಿದ್ದರು. ಆದರೆ ಆತ ಆವತ್ತು ತಪ್ಪಿಸಿಕೊಂಡಿದ್ದ. ಈ ನಡುವೆ ಬೆನ್ನಟ್ಟಿಕೊಂಡು ಹೋದ ವಿದ್ಯಾರ್ಥಿಗಳನ್ನೇ ಅಲ್ಲಿನ ಕೆಲವು ಯುವಕರು ಬೆದರಿಸಿದ್ದಾರೆ.ʻʻ ನಿಮ್ಮ ಕಾಲೇಜಿನ ವಿದ್ಯಾರ್ಥಿನಿಯರನ್ನು ರೇಪ್ ಮಾಡುತ್ತೇವೆ. ಏನು ಮಾಡುತ್ತೀರಿ, ಮಾಡಿಕೊಳ್ಳಿʼʼ ಎಂದು ಬೆದರಿಕೆ ಹಾಕಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮೆಡಿಕಲ್ ಕಾಲೇಜು ಶುರುವಾದ ಬಳಿಕ ಇಲ್ಲಿಗೆ ಒಂದು ಸರಿಯಾದ ಗೇಟ್ ನ ವ್ಯವಸ್ಥೆ ಮಾಡಿಲ್ಲ. ಹೋಗಲಿ ಒಂದು ಸ್ಟ್ರೀಟ್ ಲೈಟ್ ಆಗಲಿ ಮಾಡಲಾಗಿಲ್ಲ. ಇಲ್ಲಿರುವ ಹೆಣ್ಮಕ್ಕಳು ಸಂಜೆಯಾದ ಬಳಿಕ ಹೊರಗೆ ಬರುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಪರಿಚಿತರು ಬಂದರೆ ಅವರನ್ನು ಕಂಡು ಹಿಡಿಯುವುದಕ್ಕೆ ಸರಿಯಾಗಿ ಆಯಕಟ್ಟಿನ ಜಾಗದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಕಿಲ್ಲ. ಇರುವ ಕ್ಯಾಮೆರಾಗಳು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಅನ್ನುವ ಆರೋಪಗಳು ಕೇಳಿ ಬಂದಿವೆ.
ವಿದ್ಯಾರ್ಥಿನಿಯರು ತಾವು ಎದುರಿಸುತ್ತಿರುವ ಆತಂಕದ ಸ್ಥಿತಿ, ಮಧ್ಯರಾತ್ರಿ ಎಂಟ್ರಿ ಕೊಡುವ ಪುಂಡರು, ಅದಕ್ಕೆ ಸಂಬಂಧಿಸಿ ಸಿಸಿ ಟಿವಿ ಕ್ಯಾಮೆರಾ ಫೂಟೇಜ್ ಗಳು ಇದ್ದರೂ ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಅನ್ನುವುದು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಅಸಮಾಧಾನ.
ಇದೇ ಕಾರಣಕ್ಕಾಗಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದರು. ಗೇಟಿನಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಅನಧಿಕೃತ ವ್ಯಕ್ತಿಗಳು ಕಾಲೇಜು ಆವರಣವನ್ನು ಪ್ರವೇಶಿಸುವುದನ್ನು ತಡೆಯಬೇಕೆಂದು ಒತ್ತಾಯಿಸಿದರು.