ನ್ಯೂಸ್ ನಾಟೌಟ್ : ಇನ್ಮುಂದೆ ಕೊಡಗಿನಲ್ಲಿ ಸಾಕು ನಾಯಿಗಳು ದಾಳಿ ಮಾಡಿದರೆ ಮಾಲೀಕರು 6 ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.ಈ ಕುರಿತಂತೆ ಕೊಡಗು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೀಗಾಗಿ ಮಾಲೀಕರು ಎಚ್ಚರವಹಿಸುವಂತೆ ಹೇಳಲಾಗಿದೆ.
ಸಮುದಾಯ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯ ಅವರು ಮಗುವಿನ ಆರೋಗ್ಯ ತಪಾಸಣೆಗಾಗಿ ಭೇಟಿ ನೀಡಿ ತೆರಳುವಾಗ ಮನೆಯ ಸಾಕು ನಾಯಿ ದಾಳಿ ಮಾಡಿದ ಘಟನೆ ಕೊಡಗಿನ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೋಣಂಜಗೇರಿ ಪಾರಾಣೆ ಗ್ರಾಮದಲ್ಲಿ ಆ.16 ರಂದು ನಡೆದಿದೆ.
ಬೆಳತಂಡ ಮಾಚಯ್ಯ ರವರ ಮನೆಯ ಮಗುವಿಗೆ ಆರೋಗ್ಯ ತಪಾಸಣೆ ಮಾಡಿ ತೆರಳುವಾಗ ಅವರ ಸಾಕು ನಾಯಿ ಆರೋಗ್ಯ ಅಧಿಕಾರಿಯ ದೇಹದ ಹಲವು ಭಾಗಗಳಿಗೆ ಕಚ್ಚಿ ಗಾಯಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕರಾದ ಬೆಳತಂಡ ಮಾಚಯ್ಯ ಅವರ ಮೇಲೆ ನಾಪೋಕ್ಲು ಪೊಲೀಸ್ ಠಾಣೆ ಕೊಣಂಜಗೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಹೀಗಾಗಿ ಸಾರ್ವಜನಿಕರು ತಮ್ಮ ಮನೆಯ ಸಾಕು ನಾಯಿಗಳು ಯಾವುದೇ ವ್ಯಕ್ತಿಗಳ ಮೇಲೆ ದಾಳಿ ಮಾಡಿರುವ ಘಟನೆ ಕಂಡುಬಂದಲ್ಲಿ ಸಾಕು ನಾಯಿ ಮಾಲೀಕರ ಮೇಲೆ Section:- 289 IPC ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು ಹಾಗೂ 6 ತಿಂಗಳ ಜೈಲು ವಾಸ ಮತ್ತು ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತಮ್ಮ ಮನೆಯ ಸಮೀಪ ನಾಯಿ ದಾಳಿ ಮಾಡಿರುವ ಘಟನೆಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಅಥವಾ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ. ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತ್ತೇವೆ ತಿಳಿಸಲಾಗಿದೆ.