ನ್ಯೂಸ್ ನಾಟೌಟ್ : ಪಾಕಿಸ್ತಾನ, ಪೋಲೆಂಡ್, ಬಾಂಗ್ಲಾದೇಶದ ಬಳಿಕ ಇದೀಗ ದಕ್ಷಿಣ ಕೊರಿಯಾದಿಂದ ಮಹಿಳೆಯೊಬ್ಬಳು ಭಾರತಕ್ಕೆ ಹಾರಿ ಬಂದಿದ್ದಾಳೆ. ಪಾಕಿಸ್ತಾನಿ ಮಹಿಳೆ (Pakistann Women) ಸೀಮಾ ಹೈದರ್ ಪಬ್ಜೀ ಪ್ರೇಮಿಗಾಗಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ಇಂತಹ ಅನೇಕ ಘಟನೆಗಳು ಕಂಡುಬಂದಿದೆ. ಆದರೆ ದಕ್ಷಿಣ ಕೊರಿಯಾ ಮಹಿಳೆ ಅಧಿಕೃತವಾಗಿಯೇ ಭಾರತಕ್ಕೆ ಬಂದಿದ್ದಾಳೆ ಎನ್ನಲಾಗಿದೆ.
ದಕ್ಷಿಣ ಕೊರಿಯಾದ ಮಹಿಳೆ (South Korean Women) ಕಿಮ್ ಬೋಹ್-ನೀ, ಉತ್ತರ ಪ್ರದೇಶದ ತನ್ನ ಪ್ರೇಮಿ ಸುಖ್ಜಿತ್ ಸಿಂಗ್ ಜೊತೆಗೆ ಸಿಖ್ ಸಂಪ್ರದಾಯದಂತೆ ಗುರುದ್ವಾರದಲ್ಲಿ ಮದುವೆಯಾಗಿದ್ದು, ಮತ್ತೆ ದಕ್ಷಿಣ ಕೊರಿಯಾಕ್ಕೆ ಮರಳುವ ಯೋಜನೆಯಲ್ಲಿದ್ದಾಳೆ.
ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಸುಖ್ಜಿತ್ ಸಿಂಗ್ ಕೆಲಸಕ್ಕಾಗಿ ದಕ್ಷಿಣ ಕೊರಿಯಾಕ್ಕೆ ಹೋಗಿದ್ದರು. ಅಲ್ಲಿ ಕಾಫಿ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. 23 ವರ್ಷದ ಕಿಮ್ ಕೂಡ ಅದೇ ಕಾಫಿಶಾಪ್ನಲ್ಲಿ ಬಿಲ್ಲಿಂಗ್ ಕೌಂಟರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಸಿಂಗ್ 6 ತಿಂಗಳ ಕಾಲ ಭಾರತಕ್ಕೆ ಬರಬೇಕಾಯಿತು, ಆತ ಬಂದ ಮೇಲೆ ತನ್ನ ಪ್ರೇಮಿ ದೂರವಾದ ದುಃಖದಲ್ಲಿ ಆಕೆಯೂ ಭಾರತಕ್ಕೆ ಬಂದಿದ್ದಾಳೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಸಿಂಗ್, ನಾನು ಕೊರಿಯಾದ ಬುಸಾನ್ನಲ್ಲಿದ್ದಾಗ ಇಬ್ಬರು ಮಾತನಾಡಲು ಪ್ರಾರಂಭಿಸಿದೆವು. ನಾನು ಕೊರಿಯನ್ ಭಾಷೆ ಕಲಿಯುತ್ತಿದ್ದರಿಂದ ಅವಳೊಂದಿಗೆ ಮಾತನಾಡುತ್ತಿದೆ. 4 ವರ್ಷಗಳ ಕಾಲ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದೆವು. ನಾನು ಭಾರತಕ್ಕೆ ವಾಪಸ್ ಬಂದು 2 ತಿಂಗಳು ಕಳೆದ ಮೇಲೆ ನನ್ನನ್ನ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಕಿಮ್ ಬೋಹ್-ನೀ ಭಾರತೀಯ ಸಂಸ್ಕೃತಿಯನ್ನ ಹೆಚ್ಚಾಗಿ ಪ್ರೀತಿಸುತ್ತಾರೆ, ಪಂಜಾಬಿ ಹಾಡುಗಳ ಮೇಲೂ ಅವರಿಗೆ ವಿಶೇಷ ಪ್ರೀತಿ. ಇಲ್ಲಿನ ಪರಿಸರ ಅವಳಿಗೆ ಹೊಸದು. ಸದ್ಯ ಮಹಿಳೆ ಸುಖ್ಜಿತ್ ಸಿಂಗ್ ಕುಟುಂಬದೊಂದಿಗೆ ಫಾರ್ಮ್ಹೌಸ್ನಲ್ಲಿ ವಾಸಿಸುತ್ತಿದ್ದಾಳೆ. ಮೂರು ತಿಂಗಳ ವೀಸಾದಲ್ಲಿ ಭಾರತಕ್ಕೆ ಬಂದಿದ್ದು, ಇನ್ನೊಂದು ತಿಂಗಳಲ್ಲಿ ತನ್ನ ತಾಯ್ನಾಡಿಗೆ ಮರಳಲಿದ್ದಾಳೆ ಎಂದು ಸಿಂಗ್ ಹೇಳಿದ್ದಾರೆ ಎನ್ನಲಾಗಿದೆ.