ನ್ಯೂಸ್ ನಾಟೌಟ್: ಸುಳ್ಯ ಲಯನ್ಸ್ ಕ್ಲಬ್ ಅನೇಕ ಜನಪರ ಸಮಾಜ ಸೇವಾ ಚಟುವಟಿಕೆಗಳೊಂದಿಗೆ ಸುಳ್ಯದ ಜನಮಾನಸದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಸಂಸ್ಥೆ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಅಧ್ಯಕ್ಷ ಲ|ವೀರಪ್ಪ ಗೌಡ ಕಲ್ಕಲ್ ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಯನ್ಸ್ ವತಿಯಿಂದ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಶಾಲೆಗೆ ಲಭ್ಯವಿರುವ 2.30 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು 4 ವರ್ಷಗಳ ಕಾಲ ಪೋಷಣೆ, ಮಾಡಿ ಶಾಲಾಭಿವೃದ್ಧಿ ಸಮಿತಿಗೆ ಬಿಟ್ಟುಕೊಡುವ ಯೋಜನೆ ಹಾಕಲಾಗಿದೆ. ಸುಮಾರು ಒಂದು ಎಕ್ರೆ ವಿಸ್ತೀರ್ಣದಲ್ಲಿ 300 ಅಡಿಕೆ ಗಿಡ 10 ತೆಂಗಿನ ಗಿಡ ಮತ್ತು ಹಣ್ಣಿನ ಗಿಡಗಳನ್ನು ನೆಡಲು ನೆಲ ಸಮತಟ್ಟು ಕಾರ್ಯ ಮತ್ತು ನೀರಿನ ವ್ಯವಸ್ಥೆಗಾಗಿ ತುಂತುರು ನೀರಾವರಿ ಅಳವಡಿಸಿ ಆ.28 ರಂದು ಗಿಡನೆಡುವ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಸುಳ್ಯ ಶಾಸಕಿ ಕು.ಭಾಗೀರಥಿ ಚಾಲನೆ ನೀಡಲಿದ್ದಾರೆ. ವೀರಪ್ಪ ಗೌಡ ಕಲ್ಕಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ., ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಎಸ್. ಮರಿಯಪ್ಪ, ಲಯನ್ಸ್ ಮುಖ್ಯ ಜಿಲ್ಲಾ “ಗ್ಲೋಬಲ್ ಸರ್ವೀಸ್ ಬ್ಯಾಂಕಿನ ಕೋ ಆರ್ಡಿನೇಟರ್ ಲ. ಜಗದೀಶ – ಎಡಪಡಿತ್ತಾಯ, ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಿಮಾ ಸೂಂತೋಡು, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ. ಈ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಂ. ರಮೇಶ, ಲಯನ್ ಪ್ರಾಂತ್ಯ VIIರ ಪ್ರಾಂತೀಯ ಅಧ್ಯಕ್ಷ ಲಯನ್ ರೇಣುಕಾ ಸದಾನಂದ ಜಾಕೆ, ಮಧುಸೂದನ್ ಕಸ್ತೂರಿ ನರ್ಸರಿ, ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಚಂದ್ರಕಲಾ ಭಾಗವಹಿಸಲಿದ್ದಾರೆ ಎಂದು ವೀರಪ್ಪ ಗೌಡ ಕಲ್ಕಲ್ ಮಾಹಿತಿ ನೀಡಿದರು.
ನಮ್ಮ ಈ ಯೋಜನೆಗೆ ಗ್ರಾಮ ಪಂಚಾಯತ್ ಉಬರಡ್ಕ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕ ಸಮಿತಿ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ವಿಷ್ಣು ಯುವಕ ಮಂಡಲ, ವರಲಕ್ಷ್ಮೀ ಯುವತಿ ಮಂಡಲ, ಹಳೆ ವಿದ್ಯಾರ್ಥಿ ಸಂಘ, ಸ್ಥಳೀಯ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ, ಮಹಮ್ಮಾಯಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳು, ಇವರು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ನಮ್ಮ ಉದ್ದೇಶ ಸರಕಾರಿ ಶಾಲೆಗೆ ನಿರಂತರ ಆದಾಯ ಕಲ್ಪಿಸುವುದು, ಒಂದು ಮಾದರಿ ಸರಕಾರಿ ಶಾಲೆಯನ್ನು ರೂಪಿಸುವುದು. ಇದರೊಂದಿಗೆ ತಾಲೂಕಿನ ಅನೇಕ ಸರಕಾರಿ ಶಾಲೆಗಳಿಗೆ ಸ್ಥಳ ಲಭ್ಯವಿದ್ದು, ಇಂತಹ ಯೋಜನೆಗಳನ್ನು ಸಾರ್ವಜನಿಕರು ಸ್ಥಳೀಯ ಸಂಘ, ಸಂಸ್ಥೆಗಳು ಕೈಗೊಳ್ಳಲು ಪ್ರೇರಣೆಯಾಗಬಹುದೆಂಬ ಆಶಯ ನಮ್ಮದು ಎಂದು ವೀರಪ್ಪ ಗೌಡ ಕಲ್ಕಲ್ ಹೇಳಿದರು .
ಯೋಜನಾ ನಿರ್ದೇಶಕ ಹರೀಶ್ ರೈ ಉಬರಡ್ಕ ಮಾತನಾಡಿ, ನಾವು ಸಂಪೂರ್ಣ ಅಭಿವೃದ್ಧಿಯ ದೃಷ್ಟಿಯಲ್ಲಿ ಮಾತ್ರ ಕೆಲಸ ಮಾಡುತ್ತೇವೆ. ಯಾವುದೇ ಆಡಳಿತ ವ್ಯವಸ್ಥೆಯನ್ನು ಮಾಡುವುದಿಲ್ಲ. ಅಲ್ಲದೇ ಶಿಕ್ಷಕರ ನೇಮಕ ಇತರ ಯಾವುದೇ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಕಾರ್ಯದರ್ಶಿ ಲಯನ್ ದೊಡ್ಡಣ್ಣ ಬರಮೇಲು, ಕೋಶಾಧಿಕಾರಿ ಲಯನ್ ಕಿರಣ್ ನೀರ್ಪಾಡಿ, ಪ್ರಾಂತೀಯ ಅಧ್ಯಕ್ಷರಾದ ಲಯನ್ ರೇಣುಕಾ ಜಾಕೆ ಸುದ್ದಿಗೋಷ್ಠಿಯಲ್ಲಿದ್ದರು.