ನ್ಯೂಸ್ ನಾಟೌಟ್ : ಕಳೆದ ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಸೌಜನ್ಯ ಪ್ರಕರಣವನ್ನು ಮರುತನಿಖೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಸಿ.ಎಂ.ಸಿದ್ದರಾಮಯ್ಯ ಹೇಳಿದ್ದಾರೆ. ಅದಕ್ಕೂ ಮುನ್ನ ಸೌಜನ್ಯ ಪೋಷಕರು ಮುಖ್ಯವಾದ ಕೆಲಸ ಮಾಡಬೇಕಾಗಿದೆ. ಮರುತನಿಖೆಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಸಾಹಿತಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ ಬಳಿಕ ಈ ಮಾತುಗಳನ್ನಾಡಿದ್ದಾರೆ. ಸಾಹಿತಿಗಳು ಸೌಜನ್ಯ ಪ್ರಕರಣ ಮರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಅದಕ್ಕೆ ಸಿ.ಎಂ. ಸಿದ್ದರಾಮಯ್ಯ ಅವರು ಉತ್ತರಿಸುತ್ತಾ. “ಇದಕ್ಕೆ ಸಂಬಂಧ ಪಟ್ಟಂತೆ ಸೌಜನ್ಯ ಕೊಲೆ ಪ್ರಕರಣ ಮರುತನಿಖೆ ನಡೆಸುವಂತೆ ಆಕೆಯ ಪೋಷಕರು ಕೇಂದ್ರ ಸರ್ಕಾರವನ್ನು ಕೋರಬೇಕಿದೆ. ಅದರ ಬೆನ್ನಲ್ಲೇ ರಾಜ್ಯ ಸರ್ಕಾರವೂ ಮರುತನಿಖೆ ನಡೆಸಲು ಪತ್ರ ಬರೆಯಲಿದೆ. ಮಾತ್ರವಲ್ಲ ಪ್ರಕರಣ ಕುರಿತಂತೆ ಹಾಗೂ ಮರುತನಿಖೆ ನಡೆಸಲು ಕೇಂದ್ರದ ಮೇಲೆ ಒತ್ತಡ ತರುವ ಬಗ್ಗೆ ಅಡ್ವೋಕೇಟ್ ಜನರಲ್ ಅವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಅಲ್ಲಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿದ್ದು,ನೈಜ ಆರೋಪಿಗಳನ್ನು ಬಂಧಿಸಿ ಅನ್ನೋ ಒತ್ತಾಯಗಳು ಕೇಳಿ ಬರುತ್ತಿವೆ.ಇದೀಗ ನೈಜ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಧರ್ಮಸ್ಥಳದ ಸೌಜನ್ಯ ಮನೆಯಿಂದ ವಿಧಾನಸೌಧದವರೆಗೂ ಜನಜಾಗೃತಿ ಯಾತ್ರೆ ನಡೆಸಲಾಗುವುದು ಎಂದು ತ್ರಿಶೂಲ ಸೇನೆ ಸಂಘಟನೆಯ ಅಧ್ಯಕ್ಷ ಗಂಗಾಧರ ರಾಜು ಅವರು ಕೂಡ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಅವರು ” ಆ.25 ರಿಂದ ಧರ್ಮಸ್ಥಳದ ಸೌಜನ್ಯ ಮನೆಯಿಂದ ಜನಜಾಗೃತಿ ಯಾತ್ರೆ ಆರಂಭವಾಗಲಿದೆ. ಆದರೆ ಇದಕ್ಕೆ ಯಾವುದೇ ನಿಭಂಧನೆಗಳಿಲ್ಲ.ಯಾರು ಬೇಕಾದರೂ ಪಾಲ್ಗೊಳ್ಳಬಹುದು ಎಂದು ಹೇಳಿದ್ದಾರೆ. ಈ ಮೂಲಕ ದಾರಿ ಮಧ್ಯೆ ಸಿಗುವ ಪ್ರಮುಖ ನಗರಗಳಲ್ಲಿಜನರಿಗೆ ಪ್ರಕರಣದ ಬಗ್ಗೆ ತಿಳಿ ಹೇಳಲಿದ್ದೇವೆ. ಒಟ್ಟು ಮೂರು ದಿನಗಳ ಕಾಲ ಈ ಯಾತ್ರೆ ನಡೆಯಲಿದ್ದು, ಆ.28ಕ್ಕೆ ವಿಧಾನಸೌಧ ತಲುಪಲಿದೆ ಎಂದವರು ಮಾಹಿತಿ ನೀಡಿದರು.ಬಳಿಕ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಅವರಿಗೆ ಮನವಿ ಸಲ್ಲಿಸಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಲಿದ್ದೇವೆ ಎಂದವರು ತಿಳಿಸಿದರು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದ್ದಾರೆ.
ಇತ್ತೀಚೆಗಷ್ಟೇ ಗೃಹಸಚಿವ ಡಾ.ಜಿ.ಪರಮೆಶ್ವರ್ ಅವರು ‘ಸೌಜನ್ಯ ಪ್ರಕರಣ ಮುಗಿದ ಅಧ್ಯಾಯ’ ಎಂದು ಹೇಳಿಕೆ ನೀಡಿದ್ದರು.ಧಾರವಾಡದಲ್ಲಿ ಮಾತನಾಡುತ್ತಾ ಅವರು ಜನರ ಪರ -ವಿರೋಧ ಇದ್ದೇ ಇರುತ್ತದೆ ಎಂಬ ಹೇಳಿಕೆ ಇಡೀ ರಾಜ್ಯದಾದ್ಯಂತ ಕಿಚ್ಚಿನಂತೆ ಹಬ್ಬಿತ್ತು.ಸೌಜನ್ಯ ಪರ ಹೋರಾಟಗಾರರು ಈ ಹೇಳಿಕೆಗೆ ಕೆಂಡಾಮಂಡಲರಾಗಿದ್ದರು.ಪರಮೇಶ್ವರ್ ಅವರೇ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಿ ಇಲ್ಲವೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪ್ರತಿಭಟನಾಕಾರರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.
2012ರಲ್ಲಿ ವಿದ್ಯಾರ್ಥಿನಿ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ಉಸಿರು ನಿಲ್ಲಿಸಲಾಯಿತು.ಪ್ರಕರಣಕ್ಕೆ ಸಂಬಂಧಿಸಿ ಸಿಓಡಿ, ಸಿಐಡಿ, ಸಿಬಿಐ ತನಿಖೆ ನಡೆದು ಅಮಾಯಕ ಸಂತೋಷ್ರಾವ್ನನ್ನು ಆರೋಪಿ ಎಂದು ಬಿಂಬಿಸಲಾಯಿತು. ಆದರೆ, ಸಿಬಿಐ ನ್ಯಾಯಾಲಯ ಆತನನ್ನು ನೀರ್ದೋಷಿ ಎಂದು ಬಿಡುಗಡೆ ಮಾಡಿದೆ. ಆದರೆ ನಿಜವಾದ ಆರೋಪಿಗಳು ಯಾರು ಎನ್ನುವ ಪ್ರಶ್ನೆ ಬುಗಿಲೆದ್ದಿದೆ.ನೈಜ ಆರೋಪಿಗಳನ್ನು ಪತ್ತೆ ಮಾಡಿ ಅವರಿಗೆ ಕಠಿಣವಾದ ಶಿಕ್ಷೆ ವಿಧಿಸಿ ಎಂದು ಸೌಜನ್ಯ ಪರ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ.