ನ್ಯೂಸ್ ನಾಟೌಟ್ : ಕಳೆದ 11 ವರ್ಷಗಳ ಹಿಂದೆ ನಡೆದ ಧರ್ಮಸ್ಥಳದ ಪಾಂಗಳ ನಿವಾಸಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಮಾತ್ರವಲ್ಲದೇ ದೇಶದಾದ್ಯಂತ ಪ್ರತಿಭಟನೆಗಳು ನಡಿತಿವೆ.ಹಲವು ಮಂದಿ ಬೆಂಬಲವನ್ನು ಸೂಚಿಸಿದ್ದು,ನೈಜ ಆರೋಪಿಗಳನ್ನು ಬಂಧಿಸಿ ಎಂಬ ಒತ್ತಾಯಗಳು ಕೇಳಿ ಬಂದಿವೆ.ಈ ಮಧ್ಯೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗದ ಅಧ್ಯಕ್ಷ ನಾಗನ ಗೌಡ ಅವರು ಸೌಜನ್ಯಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸೌಜನ್ಯಾ ಮೃತದೇಹ ದೊರೆತ ಸ್ಥಳಕ್ಕೆ ಭೇಟಿ ನೀಡಿದ ಅವರು ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಮಾವ ವಿಠ್ಠಲ ಗೌಡರಿಂದ ಮಾಹಿತಿ ಕಲೆ ಹಾಕಿದರು.ಬಳಿಕ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು” ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಅನ್ಯಾಯಕ್ಕೆ ಬಲಿಯಾದ ಕುಟುಂಬದ ಪರವಾಗಿ ನಾವಿದ್ದೇವೆ.ಬಡ ಕುಟುಂಬದ ಪರವಾಗಿ ಆಯೋಗದಿಂಂದ ಯಾವೆಲ್ಲ ಕಾನೂನು ರೀತಿ ಮುಂದುವರಿಯಲು ಸಾಧ್ಯವಿದೆಯೋ ಅದೆಲ್ಲವನ್ನು ಎಲ್ಲ ಆಯಾಮಗಳಡಿ ಪರಿಶೀಲಿಸಲಾಗುವುದು ಎಂದು ಹೇಳಿದರು.ಬಳಿಕ ಸರಕಾರದ ಹಾಗೂ ಸಿಎಂ ಗಮನಕ್ಕೆ ತಂದು ಮನವರಿಕೆ ಮಾಡಲಿದ್ದೇವೆ ಎಂದು ಭರವಸೆ ನೀಡಿದರು.
ಸೌಜನ್ಯ ಕುಟುಂಬ ಸಂಕಷ್ಟವನ್ನು ಎದುರಿಸುತ್ತಿದೆ.ಹೀಗಾಗಿ ಸಹೋದರ ಹಾಗೂ ಸಹೋದರಿಯರಲ್ಲಿ ಒಬ್ಬರಿಗೆ ಸರಕಾರಿ ಉದ್ಯೋಗ ನೀಡಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಶಿಫಾರಸು ಮಾಡುವ ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ಸೌಜನ್ಯ ಅತ್ಯಾಚಾರ ಹಾಗೂ ಕೊಲೆಗೀಡಾದ ಸ್ಥಳದಲ್ಲಿ ಮಕ್ಕಳು ಈಗಲೂ ಬಸ್ ಸೌಕರ್ಯವಿಲ್ಲದೇ ಕೊರಗುತ್ತಿದ್ದಾರೆ.ಮುಖ್ಯವಾಗಿ ಈಗಲೂ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದು ಕೂಡಲೇ ಬಸ್ ವ್ಯವಸ್ಥೆಗಳಾಗಬೇಕು ಎಂಬ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ಗೆ ಸೂಚಿಸಿದ್ದೇನೆ ಎಂದರು. ಇದಲ್ಲದೇ ಸ್ಥಳೀಯವಾಗಿ ಅಂಗನವಾಡಿ ಕೇಂದ್ರದ ಬೇಡಿಕೆ ಬಗ್ಗೆ ಸೌಜನ್ಯಳ ಮನೆಮಂದಿಗೆ ತಿಳಿಸಿದ್ದಾರೆ ಎಂದವರು ಹೇಳಿದರು.
ವಿಟ್ಲದಲ್ಲಿಯೂ ದೌರ್ಜನ್ಯಕ್ಕೆ ಈಡಾದ ಮಗುವಿಗೆ ನ್ಯಾಯ ಒದಗಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದ ಅವರು, ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ಈ ವೇಳೆ ಸಿಡಿಪಿಒ ಪ್ರಿಯಾ ಆ್ಯಗ್ನೆಸ್, ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಧರ್ಮಸ್ಥಳ, ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ನಾಗನ ಗೌಡ ಅವರು, ಪೋಕ್ಸೋ ಎಂಬ ಗಂಭೀರ ಕಾನೂನಿನ ಬಗ್ಗೆ ಗ್ರಾಮೀಣ ಮಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಅದರ ಶಿಕ್ಷೆಯ ಪ್ರಮಾಣದ ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೈಕ್ನಲ್ಲಿ ಪ್ರಚಾರ ಮಾಡುವಂತೆ ತಹಶೀಲ್ದಾರ್ ಮತ್ತು ತಾ.ಪಂ. ಇಒ, ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.