ನ್ಯೂಸ್ ನಾಟೌಟ್: ಭತ್ತದ ಗದ್ದೆಗಳು ನಮ್ಮ ಅನ್ನದ ಬಟ್ಟಲು. ಅನ್ನ ನೀಡುವ ಭತ್ತದ ಕೃಷಿಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಮೂಡಿಸಬೇಕು. ಶಾಲೆಗಳಲ್ಲಿ ಭತ್ತ ಬೆಳೆಸಲು ಪ್ರೋತ್ಸಾಹ ನೀಡಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ಲಯನ್ಸ್ ಕ್ಲಬ್ ವತಿಯಿಂದ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿ ಶಾಲೆಯ ಸ್ಥಳದಲ್ಲಿ ತೆಂಗು, ಅಡಿಕೆ ಮತ್ತು ಹಣ್ಣಿನ ತೋಟವನ್ನು ರಚನೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಡಿಕೆ ಗಿಡವನ್ನು ನೆಟ್ಟು, ಫಲಕ ಅನಾವರಣಗೊಳಿಸಿದರು.
ದೇಶದ ಜೀವನಾಡಿ ಕೃಷಿ. ಈ ಕೃಷಿಗೆ ಪ್ರೋತ್ಸಾಹ ನೀಡುವ, ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ ಕಾರ್ಯ ಶ್ರೇಷ್ಠವಾದುದು. ನಮ್ಮ ಸುಳ್ಯವನ್ನು ಮಾದರಿ ತಾಲೂಕನ್ನಾಗಿ ಪರಿವರ್ತಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಮುಖ್ಯ ಜಿಲ್ಲಾ ಗ್ಲೋಬಲ್ ಸರ್ವೀಸ್ ಬ್ಯಾಂಕಿನ ಕೋ ಆರ್ಡಿನೇಟರ್ ಜಗದೀಶ ಎಡಪಡಿತ್ತಾಯ ಮಾತನಾಡಿ, ವಿದ್ಯೆಗೆ ಪೂರಕವಾಗಿ ಕೃಷಿ ಜೀವನದ ಪಾಠ ಹೇಳಿ ಕೊಡುವ ಸುಳ್ಯ ಲಯನ್ಸ್ ಕ್ಲಬ್ನ ಕಾರ್ಯ ಶ್ಲಾಘನೀಯ ಎಂದರು.
ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಲ್ಕಲ್ ಅಧ್ಯಕ್ಷತೆ ವಹಿಸಿದ್ದರು. ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಿತ್ರಾ ಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ ಬಿ.ಇ, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ.ಎಂ. ರಮೇಶ, ಉದ್ಯಮಿ, ಕಸ್ತೂರಿ ನರ್ಸರಿಯ ಮಧುಸೂದನ್ ಕುಂಭಕ್ಕೋಡು, ಲಯನ್ಸ್ ಪ್ರಾಂತ್ಯ VII ರ ಪ್ರಾಂತೀಯ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಲ್ಕಲ್, ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ಕಿರಣ್ ನೀರ್ಪಾಡಿ,ಯೋಜನಾ ನಿರ್ದೇಶಕ ಹರೀಶ್ ಉಬರಡ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂದ್ರಕಲಾ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಸ್ವಾಗತಿಸಿ, ಯೋಜನಾ ನಿರ್ದೇಶಕ ಹರೀಶ್ ಉಬರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು ವಂದಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.
ಲಯನ್ಸ್ ಸಂಸ್ಥೆ 50 ವರ್ಷ ಪೂರೈಸಿದ್ದು, ಈ ವರ್ಷ 51ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಲಯನ್ಸ್ ಸಂಸ್ಥೆ ಹೊಸ ಯೋಜನೆ ರೂಪಿಸುವ ದೃಷ್ಟಿಯಿಂದ ಸರಕಾರಿ ಶಾಲೆಯನ್ನು ದತ್ತು ಪಡೆದು ಅದರ ಅಭಿವೃದ್ಧಿಗೆ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಸುಳ್ಯ ಕೊಡಿಯಾಲಬೈಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿ ಆ ಶಾಲೆಗೆ ಲಭ್ಯವಿರುವ 2.30 ಎಕ್ರೆ ಸ್ಥಳದಲ್ಲಿ ಅಡಿಕೆ, ತೆಂಗು ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು 4 ವರ್ಷಗಳ ಕಾಲ ಪೋಷಣೆ ಮಾಡಿ ಶಾಲಾಭಿವೃದ್ಧಿ ಸಮಿತಿಗೆ ಹಸ್ತಾಂತರಿಸಲಾಗುವುದು. 300 ಅಡಿಕೆ ಗಿಡ, 10 ತೆಂಗಿನ ಗಿಡ ಮತ್ತು ಹಣ್ಣಿನ ಗಿಡಗಳನ್ನು ನೆಟ್ಟು ನೀರಿನ ಸಂಪರ್ಕಕ್ಕೆ ಸ್ಪಿಂಕ್ಲರ್ ಅಳವಡಿಸಲಾಗಿದೆ.
ಗ್ರಾಮ ಪಂಚಾಯತ್ ಉಬರಡ್ಕ, ಶಾಲಾ ಅಭಿವೃದ್ಧಿ ಸಮಿತಿ ಮತ್ತು ಪೋಷಕ ಸಮಿತಿ, ಶಿಕ್ಷಣ ಇಲಾಖೆ, ತೋಟಗಾರಿಕೆ ಇಲಾಖೆ, ವಿಷ್ಣು ಯುವಕ ಮಂಡಲ, ವರಲಕ್ಷ್ಮೀ ಯುವತಿ ಮಂಡಲ, ಹಳೇ ವಿದ್ಯಾರ್ಥಿ ಸಂಘ, ಸ್ಥಳೀಯ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿ, ಮಹಮ್ಮಾಯಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳು, ಇವರು ಸಹಕಾರ ನೀಡಿದ್ದಾರೆ.
ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಮಾತನಾಡಿ, ಶಾಲೆಗೆ ನಿರಂತರ ಆದಾಯ ಕಲ್ಪಿಸುವುದು. ಒಂದು ಮಾದರಿ ಸರಕಾರಿ ಶಾಲೆಯನ್ನು ರೂಪಿಸುವುದು ಉದ್ದೇಶ. ಇದರೊಂದಿಗೆ ತಾಲೂಕಿನ ಅನೇಕ ಸರಕಾರಿ ಶಾಲೆಗಳಿಗೆ ಸ್ಥಳ ಲಭ್ಯವಿದ್ದು, ಇಂತಹ ಯೋಜನೆಗಳನ್ನು ಸಾರ್ವಜನಿಕರು ಸ್ಥಳೀಯ ಸಂಘ, ಸಂಸ್ಥೆಗಳು ಕೈಗೊಳ್ಳಲು ಪ್ರೇರಣೆಯಾಗಬಹುದೆಂಬ ಸಾಧ್ಯವಾಗುವುದು. ಜೊತೆಗೆ ಮಕ್ಕಳಲ್ಲಿಯೂ ಕೃಷಿ ಆಸಕ್ತಿ ಮೂಡಲು ಸಹಕಾರಿಯಾಗಬಹುದು ಎಂದು ತಿಳಿಸಿದ್ದಾರೆ.