ನ್ಯೂಸ್ ನಾಟೌಟ್: ಕಿಸ್, ಮುತ್ತು ಕೇವಲ ನಮ್ಮ ಬಾಳ ಸಂಗಾತಿಗೆ ಮಾತ್ರ ಕೊಡುವುದು ಅಲ್ಲದೇ, ಪುಟ್ಟ ಮಕ್ಕಳಿಗೆ, ನಮ್ಮ ಪೋಷಕರಿಗೆ, ಪ್ರೀತಿಯ ಪ್ರಾಣಿಗಳಿಗೂ ನೀಡುವುದು ಸಹಜ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ತುಂಬಾ ಹೊತ್ತು ಕಿಸ್ ಮಾಡಿ ಓರ್ವ ವ್ಯಕ್ತಿ ತನ್ನ ಕಿವಿಯ ಕೇಳಿಸಿಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿದ್ದಾನೆ ಎನ್ನುವುದು ವಿಚಿತ್ರ.
ಇನ್ನು ಕಪಲ್ಸ್ ಗಳಿಗಾಗಿ ಲಾಂಗ್ ಲಿಪ್ ಲಾಕ್ ಸ್ಪರ್ಧೆಗಳನ್ನೆಲ್ಲಾ ಏರ್ಪಡಿಸಲಾಗುತ್ತದೆ. ಇದರಲ್ಲಿ ಅದೆಷ್ಟೋ ಜನರು ಟಾಪ್ 1 ಬಂದಿದ್ದಾರೆ. ಅದು ಗಂಟೆಗಟ್ಟಲೆ ಕಿಸ್ ಮಾಡಿ ಹಲವರು ದಾಖಲೆಗಳನ್ನೇ ಬರೆದವರಿದ್ದಾರೆ. ಆದರೆ, ಈ ಘಟನೆಯೇ ವಿಚಿತ್ರ,
ಚೀನಾದ ವ್ಯಕ್ತಿಯೊಬ್ಬ ತನ್ನ ಗರ್ಲ್ಫ್ರೆಂಡ್ ಜತೆ 10 ನಿಮಿಷಗಳ ಕಾಲ ದೀರ್ಘವಾಗಿ ಕಿಸ್ ಮಾಡಲು ಹೋಗಿ ಆತನ ಕಿವಿಯ ಶಕ್ತಿಯನ್ನು ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ಸೌಥ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಆ. 22ರಂದು ಯುವಜೋಡಿ ಪೂರ್ವ ಚೀನಾದ ಜೆಜಿಯಾಂಗ್ ಪ್ರಾಂತ್ಯದ ಪಶ್ಚಿಮ ಕೆರೆಯ ದಡದಲ್ಲಿ ಡೇಟಿಂಗ್ ಮಾಡುತ್ತಿದ್ದರು. ಈ ವೇಳೆ ಕಪಲ್ ಕಿಸ್ ಮಾಡುತ್ತಿರಬೇಕಾದ್ರೆ, ಯುವಕನ ಕಿವಿಯಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಆತ ಸಮೀಪದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಆತನನ್ನು ಪರೀಕ್ಷಿಸಿದ ವೈದ್ಯರು, ಕಿವಿಯ ತಮಟೆ ಹರಿದಿದೆ ಎಂದು ಹೇಳಿದ್ದಾರೆ. ಆತನಿಗೆ ವೈದ್ಯರು ಆ್ಯಂಟಿ ಬಯೋಟಿಕ್ ನೀಡಲಾಗಿದೆ. ಆತ ಸರಿ ಆಗಲು ಎರಡು ತಿಂಗಳು ಬೇಕೆಂದು ವೈದ್ಯರು ತಿಳಿಸಿದ್ದು ಅಚ್ಚರಿಗೆ ಕಾರಣವಾಗಿದೆ.
ಇಬ್ಬರೂ ತುಂಬಾ ಹೊತ್ತಿನಿಂದ ಕಿಸ್ ಮಾಡುವಾಗ ಭಾವೋದ್ರೇಕಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಕಿವಿಯ ಒಳಗಿನ ಗಾಳಿಯ ಒತ್ತಡದಲ್ಲಿ ಬದಲಾವಣೆ ಆಗಿದೆ. ಈ ರೀತಿಯ ಕಿಸ್ ಮಾಡುವಾಗ ಭಾರೀ ಉಸಿರಾಟದಿಂದಾಗಿ ಕಿವಿಯೊಳಗೆ ಅಸಮತೋಲನ ಉಂಟಾಗಿ ಕಿವಿಯ ತಮಟೆ ಹರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಮಗೆ ಎತ್ತರದ ಬೆಟ್ಟಕ್ಕೆ ಹತ್ತಿದಾಗ ಅಥವಾ ಅತೀ ಎತ್ತರದ ಜಾಗಕ್ಕೆ ಹೋದಾಗ ಗಾಳಿಯ ಒತ್ತಡದಿಂದಾಗಿ ಕಿವಿ ಕೇಳಿಸುವಿಕೆಯಲ್ಲಿ ಬದಲಾವಣೆಯಾಗುವಂತೆ ಇಲ್ಲಿಯೂ ಉದ್ರೇಖಗೊಂಡ ಕಾರಣ ಗಾಳಿಯ ಸೆಳೆತ ಅಥವಾ ಒತ್ತಡಕ್ಕೆ ಹಾಗಾಗಿರಬಹುದು ಎನ್ನಲಾಗಿದೆ.