ನ್ಯೂಸ್ ನಾಟೌಟ್ : ಇತ್ತೀಚೆನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿದೆ.ಪೋಷಕರು ಕೂಡ ಮಕ್ಕಳನ್ನು ಸಮಾಧಾನ ಪಡಿಸಲು ಮೊಬೈಲ್ ನೀಡುತ್ತಾರೆ. ಅವರೇನಾದ್ರೂ ಹಠ ಮಾಡಿದ್ರೆ ಸಾಕು ಕೈನಲ್ಲಿದ್ದ ಮೊಬೈಲ್ ಕೊಟ್ಟು ತಮ್ಮ ಪಾಡಿಗೆ ಇದ್ದು ಬಿಡುತ್ತಾರೆ. ಆದರೆ ಇದು ಅತಿಯಾದರೆ ಮತ್ತೆ ಇದರಿಂದ ಮಕ್ಕಳನ್ನು ಈ ಗುಂಗಿನಿಂದ ಹೊರಬರಿಸೋದು ಹೇಗೆ ಎನ್ನುವ ಆತಂಕ ಪೋಷಕರಲ್ಲಿ ಮೂಡಿದೆ. ಸದ್ಯ ಮಕ್ಕಳ ಮೊಬೈಲ್ ವ್ಯಾಮೋಹಕ್ಕೆ ಕಡಿವಾಣ ಹಾಕಲು ರಾಜ್ಯ ಮಕ್ಕಳ ಆಯೋಗವು ಮುಂದಾಗಿದೆ. ಹೊಸ ಪ್ಲಾನ್ ಹೂಡಿದೆ . ಏನಿದು ಪ್ಲ್ಯಾನ್ ?
ಹೌದು,ಮಕ್ಕಳಲ್ಲಿ ಮೊಬೈಲ್ ಆಸಕ್ತಿ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಅವರಲ್ಲಿ ಇತರ ಆಸಕ್ತಿಗಳು ಕಡಿಮೆಯಾಗುತ್ತಿವೆ. ಮಕ್ಕಳು ಕ್ರೀಡೆ , ಕಲೆ, ಸಾಹಿತ್ಯದತ್ತ ಒಲವು ತೋರಿಸುವವರೇ ವಿರಳವಾಗಿದ್ದಾರೆ.ಇದಕ್ಕಾಗಿ ಅವರನ್ನು ಮೊಬೈಲ್ ಗೀಳಿನಿಂದ ತಪ್ಪಿಸುವಂತೆ ಮಾಡಲು ಉಪಾಯವೊಂದನ್ನು ಕಂಡು ಹುಡುಕಿದೆ. ಕೇವಲ ಶೈಕ್ಷಣಿಕ ಬಳಕೆಗಷ್ಟೇ ಫೋನ್ ಬಳಸುವಂತೆ ಹಾಗೂ ಅವರಿಗೆ ಅಗತ್ಯವಲ್ಲದ ಆ್ಯಪ್ ತೆರೆಯಲು ಸಾಧ್ಯವಾಗದಂತೆ ಮಾಡಲು ಮುಂದಾಗಿದೆ. ಮಕ್ಕಳು ಮೊಬೈಲ್ ಬಳಸುವಾಗ ಅವರ ಬೆರಳ ಸ್ಪರ್ಶದಿಂದ ಕೆಲವೊಂದು ಆ್ಯಪ್ಗಳು ಓಪನ್ ಆಗದಂತೆ ಮಾಡಲು ಆಯೋಗ ತಯಾರಿ ನಡೆಸಿದೆ ಎಂದು ಹೇಳಲಾಗಿದೆ.
ಇನ್ಫೋಸಿಸ್ನಿಂದ ಸಿದ್ಧತೆ
ಮಕ್ಕಳು ಮೊಬೈಲ್ ನಿಂದ ಹೊರಬರೋದು ಕಷ್ಟ ಆದರೆ ಕಲವೊಂದು ಆ್ಯಪ್ ಗಳನ್ನು ತೆರೆಯದಂತೆ ಮಾಡಿದರೆ ಮಕ್ಕಳು ಕಾಲ ಕ್ರಮೆಣ ಅದರಿಂದ ದೂರವಿರುತ್ತಾರೆ. ಇದರ ಮೂಲ ಉದ್ದೇಶ ಕೂಡ ಇದೇ ಆಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗಾಗಿ ಮಾತ್ರ ಮೊಬೈಲ್ ಬಳಕೆ ಆಗುವಂತೆ ಆ್ಯಪ್ ಸಿದ್ಧಪಡಿಸಲಾಗುತ್ತಿದೆ. ರಾಜ್ಯ ಮಕ್ಕಳ ಆಯೋಗವು ಇದಕ್ಕಾಗಿ ಆ್ಯಪ್ವೊಂದನ್ನು ಸಿದ್ಧಪಡಿಸಲು ಯೋಜನೆ ರೂಪಿಸಿದೆ. ಇದರ ಸಂಬಂಧ ಇನ್ಫೋಸಿಸ್ ಜತೆಗೂ ಮಾತುಕತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಸದ್ಯ ಆ್ಯಪ್ ಯಾವ ರೀತಿ ಇರಬೇಕು, ಅದನ್ನೂ ಯಾವ ರೀತಿ ಬಳಕೆ ಮಾಡಬಹುದು ಎಂಬಿತ್ಯಾದಿಯಲ್ಲಿ ಚರ್ಚೆಗಳು ನಡೆಯುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.ಹೀಗಾಗಿ ಮಕ್ಕಳು ಸೇಫ್ ಆಗಿ ಇರಬೇಕು.ಅವರ ಭವಿಷ್ಯ ಚೆನ್ನಾಗಿರಬೇಕೆಂಬ ಸದುದ್ದೇಶದಿಂದ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದು ಸದ್ಯದಲ್ಲೆ ಇದಕ್ಕೆ ಉತ್ತರ ಸಿಗಲಿದೆ.
ರಾಜ್ಯ ಮಕ್ಕಳ ಆಯೋಗವು ಮಕ್ಕಳನ್ನೊಳಗೊಂಡ ಹತ್ತು ಜನರ ತಂಡವನ್ನು ರಚಿಸಿ ಸಮೀಕ್ಷೆಗೆ ಸಿದ್ಧವಾಗಿದೆ. ಮಕ್ಕಳ ಮೊಬೈಲ್ ಚಟ ತಪ್ಪಿಸಲು ಮಕ್ಕಳನ್ನೇ ಈ ತಂಡದಲ್ಲಿ ಸೇರಿಸಿಕೊಂಡು ಸೂತ್ರವನ್ನು ಕಂಡು ಹುಡುಕುತ್ತಿದೆ. ಮಕ್ಕಳ ಪೋಷಕರು, ಮಾಧ್ಯಮದವರು, ಮಾನಸಿಕ ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಸೈಬರ್ ಕ್ರೈ ತಜ್ಞರು ಇದಕ್ಕೆ ಸಾಥ್ ನೀಡುತ್ತಿದ್ದಾರೆ. ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕ ಆ್ಯಪ್ ತರಲು ಸಿದ್ಧತೆ ನಡೆಸುತ್ತಿದೆ.
ಮಕ್ಕಳ ಮೊಬೈಲ್ ಬಳಕೆ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಣ್ಣಿಗೆ,ಮೆದುಳಿಗೆ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನು ಎಳವೆಯಲ್ಲೇ ಅನುಭವಿಸುವಂತಾಗಿದೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಬಾಲ್ಯ ವಿವಾಹ ಸೇರಿದಂತೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಳಗೊಂಡಿದೆ. ಹೀಗಾಗಿ ಇದೆಲ್ಲವನ್ನೂ ನಿಯಂತ್ರಿಸಬೇಕಾದರೆ ಮಕ್ಕಳಿಗೆ ಮೊಬೈಲ್ನಲ್ಲಿ ನಿಯಂತ್ರಣ ಬೇಕಾಗಿದೆ.ಸದ್ಯ ಮೂರು ತಿಂಗಳ ನಂತರ ಮಕ್ಕಳಿಗಾಗಿ ಆ್ಯಪ್ ಬರಲಿದ್ದು, ಎಷ್ಟರ ಮಟ್ಟಿಗೆ ಪ್ರಯೋಜನಕಾರಿ ಆಗಲಿದೆ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.