ನ್ಯೂಸ್ ನಾಟೌಟ್ : ಮಗ ಬೌದ್ಧ ಮಹಿಳೆ ಜತೆ ಪರಾರಿಯಾಗಿ ವಿವಾಹವಾಗಿದ್ದಾನೆಂದು ಭಾರತೀಯ ಜನತಾ ಪಕ್ಷ ತನ್ನ ಹಿರಿಯ ಮುಖಂಡರೊಬ್ಬರನ್ನು ಪಕ್ಷದಿಂದ ಉಚ್ಛಾಟಿಸಿರುವ ಘಟನೆ ಲಡಾಖ್ ನಿಂದ ವರದಿಯಾಗಿದೆ.
ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ನಝೀರ್ ಅಹ್ಮದ್ (74ವರ್ಷ) ಎಂಬವರ ಪುತ್ರ ಬೌದ್ಧ ಮಹಿಳೆ ಜತೆ ಓಡಿ ಹೋಗಿ ವಿವಾಹವಾಗಿದ್ದಾರೆ.ಹೀಗಾಗಿ ನಝೀರ್ ಪುತ್ರ ಬೌದ್ಧ ಮಹಿಳೆ ಜತೆ ಸಂಬಂಧ ಹೊಂದಿರುವ ಸೂಕ್ಷ್ಮ ವಿಚಾರದ ಬಗ್ಗೆ ತಂದೆಯ ಪಾತ್ರವನ್ನು ಸ್ಪಷ್ಟಪಡಿಸುವಂತೆ ಸೂಚಿಸಲಾಗಿತ್ತು. ಆದರೆ ಸಮರ್ಪಕ ಉತ್ತರ ನೀಡದ ಹಿನ್ನೆಲೆ ನಝೀರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಲಡಾಖ್ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ.
ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಲಡಾಖ್ ಬಿಜೆಪಿ ಅಧ್ಯಕ್ಷ ಫುನ್ ಚೋಕ್ ಸ್ಟಾಂಜಿನ್ ಪಕ್ಷದಿಂದ ಉಚ್ಛಾಟಿಸುವ ಆದೇಶ ಹೊರಡಿಸಿರುವುದಾಗಿ ವರದಿ ಹೇಳಿದೆ. ನಝೀರ್ ಅಹ್ಮದ್ ಪುತ್ರ ಮಂಝೂರ್ ಅಹ್ಮದ್ (39ವರ್ಷ), 35 ವರ್ಷದ ಬೌದ್ಧ ಮಹಿಳೆ ಜೊತೆ ಕೋರ್ಟ್ ನಲ್ಲಿ ವಿವಾಹವಾಗಿದ್ದರು. ಈ ಸಂದರ್ಭದಲ್ಲಿ ನಝೀರ್ ಅಹ್ಮದ್ ಅವರು ಹಜ್ ಯಾತ್ರೆಗೆ ತೆರಳಿದ್ದರು ಎಂದು ಅಹ್ಮದ್ ತಿಳಿಸಿದ್ದಾರೆ.ಇದೀಗ ಲಡಾಖ್ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿರುವ ನಝೀರ್ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾಗೊಳಿಸಿರುವುದಾಗಿ ವರದಿ ವಿವರಿಸಿದೆ.