ನ್ಯೂಸ್ ನಾಟೌಟ್ : ವಿಪರೀತ ಮಳೆ ಇರೋ ಹಿನ್ನಲೆಯಲ್ಲಿ ಹಾಗೂ ಸಮುದ್ರ ತೀರ ಸಹಿತ ಪ್ರವಾಸಿ ತಾಣಗಳಿಗೆ ನಿರ್ಭಂಧ ಹೇರಲಾಗಿದೆ. ಹೀಗಿದ್ದರೂ ಕೂಡ ಆ ಭಾಗಕ್ಕೆ ಒಂದು ವೇಳೆ ತೆರಳಿದರೆ ನೀವು ತೊಂದರೆ ಅನುಭವಿಸೋದು ಗ್ಯಾರಂಟಿ. ಯಾಕೆಂದ್ರೆ ಯಾರು ಆ ಸ್ಥಳಗಳಿಗೆ ಭೇಟಿ ನೀಡುತ್ತಾರೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ ಹುಷಾರ್.
ಹೌದು, ಜಿಲ್ಲಾಡಳಿತ ಈ ಒಂದು ಚಿಂತನೆ ನಡೆಸುತ್ತಿದೆ.ಇತ್ತೀಚೆಗಷ್ಟೇ ಕೊಲ್ಲೂರಿನಲ್ಲಿ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ನೀರುಪಾಲಾದ ಘಟನೆ ನಡೆದಿತ್ತು. ಇದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇನ್ನೇನು ಈ ಘಟನೆ ಮಾಸುವ ಮುನ್ನವೇ ಮಡಿಕೇರಿಯಿಂದ ನಾಪತ್ತೆಯಾಗಿ ಮಲ್ಪೆಗೆ ಬಂದಿದ್ದ ಇಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ವಿದ್ಯಾರ್ಥಿನಿ ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ ಘಟನೆ ಸಂಭವಿಸಿತ್ತು. ಹೀಗಾಗಿ ಜಿಲ್ಲಾಡಳಿತ ಈ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ.
ಮಳೆಗಾಲ ಆದ ಕಾರಣ ಪ್ರವಾಸಿಗರು ಯಾರ ಗಮನಕ್ಕೂ ಬಾರದೇ ತೆರಳಿದ ಸಂದರ್ಭಗಳು ವರದಿಯಾಗಿವೆ . ಪ್ರವಾಸಿ ತಾಣವಾದ ಮಲ್ಪೆಯಲ್ಲಿ ಐವರು ಲೈಫ್ಗಾರ್ಡ್ ಗಳಿದ್ದರೂ ಅನ್ಯ ಜಿಲ್ಲೆಯಿಂದ ಆಗಮಿಸುವವರಿಗೆ ಎಷ್ಟೇ ಸೂಚನೆ, ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಾರೆ. ಎಚ್ಚರಿಕೆ ಮಾತಿಗೆ ಸ್ಪಂದಿಸದಿರುವುದೇ ಅನಾಹುತಗಳಿಗೆ ಕಾರಣ ಎಂದು ತಿಳಿದು ಬಂದಿದೆ.
ಪ್ರಸ್ತುತ ಮಲ್ಪೆ ಬೀಚ್ನಲ್ಲಿ ಐವರು ಜೀವರಕ್ಷಕರಿದ್ದರೂ ಸಮುದ್ರದ ಆಳ, ಅಪಾಯಕಾರಿ ಸ್ಥಳ, ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವ ತಂತ್ರಗಾರಿಕೆ ಅವರಲ್ಲಿದ್ದರೂ ಕಷ್ಟ ಸಾಧ್ಯ. ಅತ್ಯಾಧುನಿಕ ರಕ್ಷಣ ಸೌಕರ್ಯಗಳ ಕೊರತೆಯೇ ಇದಕ್ಕೆ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ.
ಹೀಗಾಗಿ ಸಮುದ್ರದ ತೀರಕ್ಕೆ ಹೋಗುವಾಗ ಯೋಚಿಸಬೇಕಾಗುತ್ತದೆ. ಪ್ರಸ್ತುತ ಅವರಲ್ಲಿರುವುದು ರೋಪ್, ಜಾಕೆಟ್ ಮತ್ತು ರಿಂಗ್ ಮಾತ್ರ. ಹೀಗಾಗಿ ನಮ್ಮ ಜೀವ ನಮ್ಮ ಕೈಯಲ್ಲಿರೋದ್ರಿಂದ ಇಂತಹ ಅವಘಡಗಳು ಸಂಭವಿಸೋ ಮುನ್ನ ಅದರಿಂದ ನಾವು ದೂರ ಇರೋದು ಒಳಿತು.
ಮಳೆಗಾಲ ಹೊರತು ಉಳಿದ ದಿನಗಳಲ್ಲಿ ಬೀಚ್ ನಿರ್ವಹಣೆ ಸಮಿತಿಯಿಂದ ಭದ್ರತೆಗೆ 7ಕ್ಕೂ ಅಧಿಕ ಮಂದಿಯನ್ನು ನಿಯೋಜಿಸಲಾಗುತ್ತದೆ. ಪ್ರಸ್ತುತ ರಾತ್ರಿ ಗಸ್ತು ನಡೆಯದ ಕಾರಣ ಕೆಲವರು ಪ್ರವಾಸಿಗರು ಆಗಮಿಸುವುದೂ ಇದೆ. ಸ್ಥಳೀಯರು ಕಂಡರೆ ಅಂಥವರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಹಗಲು ಸಹಿತ ರಾತ್ರಿ ವೇಳೆಯೂ ಮತ್ತಷ್ಟು ಗಸ್ತು ಕಾರ್ಯಾಚರಣೆಯನ್ನು ಈ ಭಾಗದಲ್ಲಿ ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳುವ ಆವಶ್ಯಕತೆಯಿದೆ.