ನ್ಯೂಸ್ ನಾಟೌಟ್ : ಒಂದಡೆ ಆರೋಗ್ಯದ ಸಮಸ್ಯೆ, ಇನ್ನೊಂದೆಡೆ ಉದ್ಯೋಗ ಇಲ್ಲ. ಜೀವನವೇ ಕಷ್ಟವಾಗಿ ಬಿಟ್ಟಿದೆ. ಬದುಕಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದ ಕಲಾವಿದ ಯುವಕನೋರ್ವ ಬಾವಿಗೆ ಹಾರಿ ಜೀವ ಕಳೆದುಕೊಂಡ ದಾರುಣ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.
ಮಿತ್ತಮಜಲು ನಿವಾಸಿ ಚಿತ್ರಕಾರ ಸಾಗರ್ ಆಚಾರ್ಯ ( 26) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಯುವಕ ಎಂದು ತಿಳಿದು ಬಂದಿದೆ.ಬೆಳಿಗ್ಗೆ ಸುಮಾರು 8.30 ರ ವೇಳೆ ಮನೆಯಂಗಳದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಾಗರ್ ಆತ್ಮಹತ್ಯೆ ಮಾಡಿಕೊಳ್ಳಲು ಸ್ಪಷ್ಟವಾದ ಕಾರಣ ನಿಗೂಢವಾಗಿದೆ. ಆದರೂ ಅನಾರೋಗ್ಯದ ನಿಮಿತ್ತ ಜೀವನದಲ್ಲಿ ಮನನೊಂದಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಅಂದಾಜಿಸಲಾಗಿದೆ.ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದಿದ್ದಲ್ಲದೇ ,ನೆರೆಹೊರೆಯವರ ಸ್ನೇಹಿತರ ಜೊತೆ ನೋವನ್ನು ಕೂಡ ಹಂಚಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಸಾಗರ್ ಒಬ್ಬ ಅತ್ಯದ್ಭುತ ಚಿತ್ರಕಾರ. ಆದರೆ ಆತನ ಕಲೆಗೆ ಜೀವ ತುಂಬಲು ಆ ವಿಧಿ ಬಿಡಲಿಲ್ಲ. ಕಲಾವಿದನಾಗಿದ್ದ ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿಸಿರೋಡಿನ ಸಿ.ಡಿ.ಪಿ.ಒ.ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದರು.ಆದರೆ ಅದಾಗಲೇ ವಿಧಿಯ ಕ್ರೂರ ದೃಷ್ಟಿ ಇವರ ಮೇಲೆ ಬಿದ್ದಿದ್ದು,ಮೊದಲೇ ಇದ್ದ ಕಿಡ್ನಿ ಸಮಸ್ಯೆ ಉಲ್ಬಣಗೊಂಡಿತು. ಹಾಗಾಗಿ ಈತ ಕೆಲಸ ಬಿಟ್ಟು ಮನೆಯಲ್ಲೇ ಇರುವ ಅನಿವರ್ಯತೆ ಎದುರಾಯಿತು.
ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲೇಬೇಕು ಎಂಬ ಸ್ಥಿತಿ ಒಂದೆಡೆ,ಇನ್ನೊಂದು ಕಡೆ ಎರಡು ಕಿಡ್ನಿ ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಈತನ ತಂದೆಯ ಒಂದು ಕಿಡ್ನಿಯನ್ನು ನೀಡಲಾಗಿತ್ತು.ಮರದ ಕೆಲಸ ಮಾಡುತ್ತಿದ್ದ ತಂದೆಯವರು ಕಿಡ್ನಿಯನ್ನು ಮಗನಿಗೆ ನೀಡಿದ ಬಳಿಕ ಕೆಲಸ ಮಾಡಲು ಸ್ವಲ್ಪ ಕಷ್ಟದ ಸ್ಥಿತಿ ಉಂಟಾಗಿತ್ತು. ಈ ನಡುವೆ ಮನೆಯಲ್ಲಿ ತಾಯಿಗೂ ಸ್ವಲ್ಪ ಅನಾರೋಗ್ಯದ ಸಮಸ್ಯೆ ಕಾಡಿತ್ತು ಎಂದು ತಿಳಿದು ಬಂದಿದೆ.
ಮನೆಯಲ್ಲಿ ಎಲ್ಲರು ಅನಾರೋಗ್ಯ ಪೀಡಿತರಾಗಿ ದುಡಿಯುವ ಕೈಗಳಿಗೆ ಶಕ್ತಿಯಿಲ್ಲ. ಔಷಧಿಗೆ ಕಾಸಿಲ್ಲ. ಸರಿಯಾದ ಉದ್ಯೋಗವು ಕೈ ಹಿಡಿಯಲಿಲ್ಲ.ಹೀಗೆ ಅನೇಕ ಬಾರಿ ಮನನೊಂದು ಈ ವಿಚಾರವನ್ನು ಸ್ನೇಹಿತರ ಬಳಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಕಿಡ್ನಿ ವೈಫಲ್ಯದ ಸಮಸ್ಯೆ ಉಂಟಾದ ಅ ಸಂದರ್ಭದಲ್ಲಿ ಮಾಧ್ಯಮಗಳು ನೆರವಿಗಾಗಿ ವರದಿಗಳನ್ನು ಮಾಡಿತ್ತು.ಆದರೆ ಅತ್ಯಂತ ಕಷ್ಟಕರ ಜೀವನವನ್ನು ಸಹಿಸಲಾರದೆ ಸಾಗರ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರ ಮಾತಾಗಿದೆ.
ಸುಮಾರು 30 ಅಡಿ ಆಳದಲ್ಲಿರುವ ಬಾವಿಯಿಂದ ಸಾಗರ್ ಅವರ ಮೃತದೇಹವನ್ನು ಬಂಟ್ವಾಳ ಅಗ್ನಿಶಾಮಕ ದಳದವರು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಸುನಿಲ್ ಕುಮಾರ್ ಅವರ ಮಾರ್ಗದರ್ಶನ ದಲ್ಲಿ, ಸಿಬ್ಬಂದಿಗಳಾದ ರೋಹಿತ್, ಕಿರಣ್ ಕುಮಾರ್, ರಾಜೇಶ್, ಸುರೇಂದ್ರ ಹಾಗೂ ನಾಗರಾಜ್ ಅವರ ನೆರವಿನಿಂದ ಬಾವಿಯಿಂದ ಮೃತದೇಹವನ್ನು ಮೇಲಕ್ಕೆತ್ತಲಾಯಿತು.