ನ್ಯೂಸ್ ನಾಟೌಟ್ : ಮನೆ ಮುಂದೆ ಆಟವಾಡುತ್ತಿರುವಾಗ ಪಕ್ಕದಲ್ಲಿಯೇ ಇದ್ದ ಬಾವಿಗೆ ಬಿದ್ದು 3 ವರ್ಷದ ಮಗು ದಾರುಣವಾಗಿ ಅಂತ್ಯ ಕಂಡ ಘಟನೆ ನಡೆದಿದೆ. ಮಗು ಬಿದ್ದರೂ ಮನೆಯವರಿಗೆ ತಿಳಿಯದೇ ಗ್ರಾಮಸ್ಥರು ನೋಡಿ ಮಾಹಿತಿ ನೀಡಿರುವ ಘಟನೆ ಕರಾವಳಿ ತೀರ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಕೇಂದ್ರ ಕಾರವಾರದಲ್ಲಿ ನಡೆದಿದೆ.
ಹೌದು, ಚಿಕ್ಕ ಮಕ್ಕಳು ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆಗಳೇ ಹೆಚ್ಚು.ಇದೀಗ ಕಾರವಾರದಲ್ಲಿಯೂ ಅಂಥದ್ದೇ ಪ್ರಕರಣ ನಡೆದಿದೆ.ಮಗು ಮನೆಯಿಂದ ಹೊರಗೆ ಆಟವಾಡಲಿ ಎಂದು ಬಿಟ್ಟರೆ, ಬಾವಿಯ ಬಳಿ ಹೋಗಿದೆ. ಕಾಲುಜಾರಿ ಬಿದ್ದಿದೆ. ಮಗುವನ್ನು ಸ್ಥುತಿ (3) ಎಂದು ಗುರುತಿಸಲಾಗಿದೆ. ಇನ್ನು ಕಾರವಾರ ನಗರದ ಹರಿದೇವ ಬಡಾವಣೆಯಲ್ಲಿ ದುರ್ಘಟನೆ ನಡೆದಿದೆ.
ಮಗಳು ಸ್ಥುತಿ ಪ್ರತಿನಿತ್ಯ ಆಟವಾಡುತ್ತಿದ್ದಳು. ಹೀಗಾಗಿ ಆಕೆ ಇಂದು ಆಟವಾಡೋದಕ್ಕೆ ಹೋಗಿದ್ದಾಳೆ. ಪೋಷಕರು ಮಗುವಿನ ಮೇಲೆ ಹೆಚ್ಚಿನ ನಿಗಾವಹಿಸದೇ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಆದರೆ, ಅವರಿಗೆ ಇಂದು ಕರಾಳ ಶನಿವಾರವಾಗಿ ಮಾರ್ಪಟ್ಟಿದೆ.
ತಾನು ಮಣ್ಣಿನಿಂದ ಗಣಪತಿ ಮೂರ್ತಿಯನ್ನು ತಯಾರಿಸಿ, ಪೂಜಿಸಿ ಬಾವಿಗೆ ಹಾಕುವ ಮಾದರಿಯಲ್ಲಿ ಮಣ್ಣಿನ ಉಂಡೆಯನ್ನು ಗಣಪತಿ ಮೂರ್ತಿ ಎಂದುಕೊಂಡು ಬಾವಿಗೆ ಹಾಕಲು ಹೋಗಿದ್ದಾಳೆಯೇ ಎನ್ನುವ ಅನುಮಾನಗಳು ಎದ್ದಿವೆ. ಬೆಳಗ್ಗೆ ಆಟವಾಡಳೆಂದು ಹೋದವಳು ಮಧ್ಯಾಹ್ನವಾದರೂ ಮಗು ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಮಗುವನ್ನು ಹುಡುಕಲು ಮುಂದಾಗಿದ್ದಾರೆ.
ಇನ್ನು ಬಡಾವಣೆಯ ಎಲ್ಲ ನಿವಾಸಿಗಳು ಎಲ್ಲೆಡೆ ಹುಡುಕಾಡಿದರೂ ಮಗು ಸಿಗದಿದ್ದಾಗ ಬಾವಿಯಲ್ಲಿ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗು ಪತ್ತೆಯಾಗಿದೆ. ಕುಟುಂಬ ಸದಸ್ಯರ ಹಾಗೂ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನು ಕಾರವಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದ್ದು, ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಲಿದ್ದಾರೆ.