ನ್ಯೂಸ್ ನಾಟೌಟ್ : ಕಳೆದ ಕೆಲವು ದಿನಗಳಿಂದ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲುಗುಂಡಿಯ ಸಮೀಪದ ಕೂಲಿಶೆಡ್ ಎಂಬಲ್ಲಿ ಹೆದ್ದಾರಿ ಮಧ್ಯೆ ಬೃಹತ್ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ಭಾರಿ ತೊಂದರೆಯಾಗಿತ್ತು. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸ್ಥಳೀಯರು ಸೇರಿ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಿದ್ದಾರೆ.
ಕಲ್ಲುಗುಂಡಿಯ ಕೂಲಿಶೆಡ್ಡ್ ನ ಕೆಳಗಿನ ಪೇಟೆಯಲ್ಲಿ ಹಾದು ಹೋಗುವ ಹೆದ್ದಾರಿಯಲ್ಲಿ ಕೆಲವು ದಿನಗಳಿಂದ ಭಾರಿ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದವು. ಇದರಿಂದ ವೇಗದಿಂದ ಬರುವ ವಾಹನ ಚಾಲಕರು ಇದನ್ನು ಗಮನಿಸದೆ ಹೊಂಡಕ್ಕೆ ಬೀಳುತ್ತಿದ್ದರು. ಇದರಿಂದ ಅಪಘಾತ ಸೃಷ್ಟಿಯಾಗುತ್ತಿತ್ತು.
ಇದನ್ನು ಗಮನಿಸಿದ ಸ್ಥಳೀಯ ಭಾರತ್ ಪೈಂಟ್ಸ್ ಮಾಲೀಕ ಕಿಫಾಯತ್ತುಲ್ಲಾ , ರುದಾಲ್ಫ್ ಮಮ್ಮುಞಿ ಸೋಡ, ರತೀಶ್ ಆಟೋ, ಸಂಜೀವ ಬಾಲೆಂಬಿ , ರಶೀದ್ , ಹಾರೀಸ್ ನೆಲ್ಲಿಕುಮೇರಿ ಮೊದಲಾದವರು ಸೇರಿ ಜಲ್ಲಿ , ಸಿಮೆಂಟ್ ಹಾಕಿ ಕಾಂಕ್ರೀಟ್ ಮಾಡಿ ಹೆದ್ದಾರಿ ಗುಂಡಿ ದುರಸ್ತಿ ಮಾಡಿದ್ದಾರೆ. ಸ್ಥಳೀಯರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.