ನ್ಯೂಸ್ ನಾಟೌಟ್ : ಚಂದ್ರಯಾನ 3 ಯಶಸ್ವಿಯಾಗಿ ಜಗತ್ತಿನ ಗಮನವನ್ನು ತನ್ನತ್ತ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇದೀಗ ಮುಂದಿನ ಮಿಷನ್ನ ಯೋಜನೆಯನ್ನು ಪ್ರಕಟಿಸಿದೆ. ಹೌದು ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ 2ರಂದು ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಿದ್ದೇವೆ ಎಂದು ಇಸ್ರೋ ತಿಳಿಸಿದೆ.
ಸೂರ್ಯನನ್ನು ಅವಲೋಕನ ಮಾಡುವ ನಿಟ್ಟಿನಲ್ಲಿ ಬ್ಯಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ ಎಲ್-1 ನೌಕೆಯನ್ನು ಇಸ್ರೋ ಕಳಿಸಿಕೊಡಲಿದೆ ಎಂದು ವರದಿಯಾಗಿತ್ತು.ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಈ ಸುದ್ದಿ ಎಲ್ಲಾ ಕಡೆ ಹಬ್ಬಿತ್ತು. ಈಗ ಈ ಯೋಜನೆಯ ಉಡಾವಣೆಯ ದಿನಾಂಕ ಹಾಗೂ ಸಮಯವನ್ನು ಇಸ್ರೋ ಪ್ರಕಟಿಸಿದೆ.
ಸೆಪ್ಟೆಂಬರ್ 2ರಂದು ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಿದ್ದು, ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇದರ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.
ಈ ಉಡಾವಣೆಯ ಸೌಂದರ್ಯವನ್ನು ಸಾರ್ವಜನಿಕರು ಕೂಡ ಕಣ್ತುಂಬಿಸಿಕೊಳ್ಳಬಹುದು. ಅದಕ್ಕಾಗಿ ಇಸ್ರೋ ನೋಂದಣಿ ಮಾಡಿಕೊಳ್ಳುವಂತೆ ಮಾಹಿತಿ ನೀಡಿದೆ. ಶಾರ್ ಎಂದು ಕರೆಯಲ್ಪಡುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 11.50ಕ್ಕೆ ಆದಿತ್ಯ ಎಲ್ -1 ಉಡಾವಣೆಯಾಗಲಿದೆ. ಇದನ್ನು ಲಾಚ್ ವೀವ್ ಗ್ಯಾಲರಿಯಿಂದ ನೋಡಬೇಕಾದಲ್ಲಿ ಆ.29ರಿಂದ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಎಂದು ಇಸ್ರೋ ಮಾಹಿತಿ ನೀಡಿದೆ.
ಏನಿದು ಆದಿತ್ಯ-ಎಲ್1 ?
ಆದಿತ್ಯ-L1 ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಸೌರ ಮಿಷನ್ ಆಗಿದೆ. ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ (15 ಲಕ್ಷ ಕಿಲೋ ಮೀಟರ್) ದೂರದಲ್ಲಿ ಲ್ಯಾಗ್ರೇಂಜ್ ಪಾಯಿಂಟ್ 1 (L1) ಇದ್ದು, ಆದಿತ್ಯ-ಎಲ್1 ಉಪಗ್ರಹವು ಈ ಎಲ್1 ಬಿಂದುವಿಗೆ ತೆರಳಲಿದೆ. ಅಲ್ಲಿ ತನ್ನ 7 ವೈಜ್ಞಾನಿಕ ಪೇಲೋಡ್ಗಳನ್ನು (ಉಪಕರಣಗಳು) ಬಳಸಿಕೊಂಡು ಸೂರ್ಯನ ಕುರಿತು ಅಧ್ಯಯನ ಮಾಡಲಿದೆ. ಇದು ನಿರಂತರವಾಗಿ ಸೂರ್ಯನನ್ನು ವೀಕ್ಷಿಸಲು ಅನುವು ಮಾಡಿಕೊಡುವ ಮೂಲಕ ವಿಜ್ಞಾನಿಗಳು ಸೌರ ಚಟುವಟಿಕೆಗಳನ್ನು ಮತ್ತು ನೈಜ ಸಮಯದಲ್ಲಿ ಬಾಹ್ಯಾಕಾಶ ಹವಾಮಾನದ ಮೇಲೆ ಅವುಗಳ ಪ್ರಭಾವವನ್ನು ಅಧ್ಯಯನ ಮಾಡಲು ಸಹಾಯ ಮಾಡಿಕೊಡುತ್ತದೆ.