ನ್ಯೂಸ್ ನಾಟೌಟ್ : ನಮಗರಿವಿಲ್ಲದ ಜಲಪಾತ ಅಥವಾ ನದಿ ಕಡೆಗೆ ಹೋಗೋ ವೇಳೆ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಅದರ ಬಗ್ಗೆ ಮಾಹಿತಿ ತಿಳಿಯದೇ ಆ ಸ್ಥಳಗಳಿಗೆ ತೆರಳಿದರೆ ಅನಾಹುತಗಳೇನಾದರೂ ಸಂಭವಿಸುವ ಸಾಧ್ಯತೆಗಳು ಹೆಚ್ಚು. ಹೀಗೆ ನದಿಯಲ್ಲಿ ಈಜಾಡುತ್ತಾ ಸಂಭ್ರಮಿಸುತ್ತಿದ್ದ ಫುಟ್ಬಾಲ್ ಆಟಗಾರನೊಬ್ಬ ಮೊಸಳೆ ಬಾಯಿಗೆ ಸಿಕ್ಕಿ ಬಲಿಯಾದ ಘಟನೆ ವರದಿಯಾಗಿದೆ.
ಕೋಸ್ಟರಿಕಾದ ಗ್ವಾನಾಕಾಸ್ಟ್ ಪ್ರಾಂತ್ಯದ ರಿಯೊ ಕ್ಯಾನಾಸ್ ನಲ್ಲಿ ಈ ಘಟನೆ ನಡೆದಿದ್ದು 29 ವರ್ಷದ ಜೀಸಸ್ ಆಲ್ಬರ್ಟೊ ಲೋಪೆಜ್ ಒರ್ಟಿಜ್ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಲೋಪೆಜ್ ರ ಮೃತದೇಹವನ್ನು ಮೊಸಳೆ ಬಾಯಲ್ಲಿ ಕಚ್ಚಿ ಎಳೆದುಕೊಂಡು ಈಜುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆದರೆ ಸ್ಥಳೀಯರ ನೆರವಿನಿಂದ ಆ ಮೊಸಳೆಯನ್ನು ಹಿಡಿದಿದ್ದಾರೆ. ಮೊಸಳೆಯನ್ನು ಗುಂಡಿಕ್ಕಿ ಸಾಯಿಸಿದ ಬಳಿಕ ವ್ಯಕ್ತಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ.ಜುಲೈ 29 ರಂದು ಈ ಘಟನೆ ನಡೆದಿದ್ದು, ಸ್ಥಳೀಯರು ಮೊಸಳೆಯನ್ನು ಬೆನ್ನಟ್ಟಿ ಹೋಗಿದ್ದರಾದರೂ ಅಷ್ಟರಲ್ಲಾಗಲೇ ಲೋಪೆಜ್ ಕೊನೆಯುಸಿರೆಳೆದಿದ್ದರು ಎಂದು ವರದಿಯಾಗಿದೆ.
ಡಿಪೋರ್ಟಿವೊ ರಿಯೊ ಕ್ಯಾನಾಸ್ ತಂಡದ ಫುಟ್ಬಾಲ್ ಆಟಗಾರರಾಗಿರುವ ಲೋಪೆಜ್ ರಿಗೆ ಎಂಟು ಮತ್ತು ಮೂರು ವರ್ಷದ ಇಬ್ಬರು ಮಕ್ಕಳಿದ್ದಾರೆ.ಕುಟುಂಬ ಸದಸ್ಯನನ್ನು ಕಳೆದುಕೊಂಡು ಕುಟುಂಬದವರ ರೋಧನ ಮುಗಿಲು ಮುಟ್ಟಿದೆ.
ಆರ್ಥಿಕ ಸಂಕಷ್ಟದಲ್ಲಿದ್ದ ಲೋಪೆಜ್ ಕುಟುಂಬವು ಅಂತ್ಯಕ್ರಿಯೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದು, ಅವರ ಫುಟ್ಬಾಲ್ ತಂಡದ ಮ್ಯಾನೇಜರ್ ಲೂಯಿಸ್ ಕಾರ್ಲೋಸ್ ಮಾಂಟೆಸ್ ಅವರು ಲೋಪೆಜ್ ಕುಟುಂಬಕ್ಕಾಗಿ ನಿಧಿ ಸಂಗ್ರಹವನ್ನು ಮಾಡಿದ್ದಾರೆ.