ನ್ಯೂಸ್ ನಾಟೌಟ್: ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿಯವರು ಇಂದು (ಆ.30) ಕೋಲಾರ ಜಿಲ್ಲೆಯ ಶ್ರೀನಿವಾಸಪುರಕ್ಕೆ ಭೇಟಿ ನೀಡಬೇಕಿತ್ತು. ಅರಣ್ಯ ಭೂಮಿ ಒತ್ತುವರಿ ತೆರವು ವೇಳೆ ರೈತರ ಬೆಳೆ ನಾಶಪಡಿಸಿರುವ ಆರೋಪ ಕೇಳಿ ಬಂದಿತ್ತು.ಈ ಹಿನ್ನೆಲೆಯಲ್ಲಿ ಸ್ಥಳೀಯ ರೈತರು ಹಾಗೂ ಅಧಿಕಾರಿಗಳೊಂದಿಗೆ ಹೆಚ್ಡಿ ಕುಮಾರಸ್ವಾಮಿಯವರು ಮಾತುಕತೆ ನಡೆಸಲಿದ್ದರು. ಆದರೆ, ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲವು ವರ್ಷಗಳಿಂದ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ನ್ಯಾಯಾಲಯದಲ್ಲಿ ಭೂ ವಿವಾದವಿತ್ತು, ನ್ಯಾಯಾಲಯದಲ್ಲಿ ಅರಣ್ಯ ಇಲಾಖೆ ಪರ ಆದೇಶ ಬಂದ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ, ಚಿಂತಗುಂಡ, ಕೇತಗಾನಹಳ್ಳಿ ಬಳಿ ಕಳೆದ 6 ದಿನಗಳಲ್ಲಿ ಇದುವರೆಗೆ ಸುಮಾರು 560 ಎಕರೆ ಒತ್ತುವರಿ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ನಡೆದಿದೆ. ತೆರವು ಕಾರ್ಯಾಚರಣೆ ವೇಳೆ ಕೋಳಿ ಫಾರಂಗಳು, ಮಾವಿನ ಮರಗಳು, ಎಲೆಕೋಸು, ಕ್ಯಾಪ್ಸಿಕಂ ಹಾಗೂ ಇತರೆ ಬೆಳೆಗಳು, ಪಂಪ್ ಸೆಟ್, ಬೋರ್ ವೆಲ್ ಎಲ್ಲವನ್ನೂ ತೆರವು ನಾಶಪಡಿಸಿದ ಆರೋಪ ಕೇಳಿಬಂದಿತ್ತು. ಇದರ ಕುರಿತು ಮಾತುಕತೆ ನಡೆಸಲು ತೆರಳಬೇಕಿದ್ದ ಹೆಚ್.ಡಿ ಕುಮಾರ ಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಹಿಂದೆ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ವೇಳೆಯೂ ಆಯಾಸದಿಂದಾಗಿ ಜ್ವರ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ವಿಶ್ರಾಂತಿ ಇಲ್ಲದೆ ಚುನಾವಣಾ ಕಾರ್ಯದಲ್ಲಿ ತೊಡಗಿದ್ದ ಅವರು ಈಗ ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದರು.