ನ್ಯೂಸ್ ನಾಟೌಟ್: ಗೌಡ ಸಮುದಾಯಕ್ಕೆ ಅವಹೇಳನ ಮಾಡಿದ್ದ ಹಾಡು ನ್ಯೂಸ್ ನಾಟೌಟ್ ವರದಿ ಬೆನ್ನಲ್ಲೇ ಡಿಲೀಟ್ ಆಗಿದೆ. ವರದಿ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಯುಟ್ಯೂಬ್ ನಿಂದ ಅದನ್ನು ಅಳಿಸಿ ಹಾಕಲಾಗಿದೆ. ಮಾತ್ರವಲ್ಲ ಕೆಲವು ಸಂದೇಶಗಳು ನ್ಯೂಸ್ ನಾಟೌಟ್ ವೆಬ್ಸೈಟ್ ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿರುವ ಅನಾಮಿಕ ವ್ಯಕ್ತಿ ಉದ್ದೇಶ ಪೂರ್ವಕವಾಗಿ ಮಾಡಿಲ್ಲ ನಮ್ಮ ವಿಡಿಯೋದಿಂದ ಯಾರಿಗಾದರೂ ನೋವಾಗಿದ್ದರೆ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಮಸ್ತ ಒಕ್ಕಲಿಗ ಗೌಡರ ಪರವಾಗಿ ನ್ಯೂಸ್ ನಾಟೌಟ್ ಎತ್ತಿದ್ದ ಧ್ವನಿಗೆ ಗೆಲುವು ಸಿಕ್ಕಿದಂತಾಗಿದೆ.
ಕರಾವಳಿ ಹಾಗೂ ಮಲ್ನಾಡಿನ ಒಕ್ಕಲಿಗ ಗೌಡ ಜನಾಂಗವನ್ನು ಅವಹೇಳನ ಮಾಡಿದ ಹಾಡೊಂದನ್ನು ರಚಿಸಿ ಯೂಟ್ಯೂಬ್ ನಲ್ಲಿ ಹರಿಯಬಿಡಲಾಗಿತ್ತು. ತಿಂಗಳ ಹಿಂದೆ ಯೂಟ್ಯೂಬ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿತ್ತು. ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇಂತಹ ಸಾಲುಗಳು ಈ ದೇಶಕ್ಕೆ ಅಪ್ರತಿಮ ಕೊಡುಗೆ ನೀಡಿದ ಮಹಾನ್ ನಾಯಕರು ಹುಟ್ಟಿದ ಗೌಡ ಸಮುದಾಯವನ್ನೇ ಅವಹೇಳನ ಮಾಡುತ್ತಿದೆ ಅನ್ನುವ ಆಕ್ರೋಶ ಕೇಳಿ ಬಂದಿತ್ತು. ಈ ಒತ್ತಡಕ್ಕೆ ಮಣಿದು ಇದೀಗ ವಿಡಿಯೋವನ್ನು ‘ಜೆಜಿ ಕ್ರಿಯೇಷನ್ಸ್’ ಅನ್ನುವ ಯುಟ್ಯೂಬ್ ಚಾನೆಲ್ ಡಿಲೀಟ್ ಮಾಡಿದೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ಗೌರವ, ಆತ್ಮಾಭಿಮಾನ ಇರುತ್ತದೆ. ಜಾತಿಯ ಮೇಲೆ ಹೆಮ್ಮೆ ಇರುತ್ತದೆ. ನಿಮ್ಮ ಉದ್ದೇಶ ಏನೇ ಇರಬಹುದು, ‘ಗೌಡ’ ಅನ್ನುವ ಪದವನ್ನು ನೀವು ಬಳಸಿಕೊಂಡು ಹಾಡಿನಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಒಕ್ಕಲಿಗ ಗೌಡ ಅನ್ನೋದು ಪ್ರಬಲ ಸಮುದಾಯ. ಒಕ್ಕಲಿಗ ಸಮುದಾಯದಲ್ಲಿ ಬೆಂಗಳೂರನ್ನು ಕಟ್ಟಿದ ಅಸಾಮಾನ್ಯ ನಾಯಕ ಕೆಂಪೇಗೌಡ, ಕವಿ ಕುವೆಂಪು, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ, ಮಾಜಿ ಪ್ರಧಾನಿ ದೇವೇಗೌಡ , ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರಭಾವಿ ಸಚಿವ ಸ್ಥಾನಗಳನ್ನು ಅಲಂಕರಿಸಿದವರಿದ್ದಾರೆ. ಜಾತಿ ಧರ್ಮದ ಎಲ್ಲೆ ಮೀರಿ ತ್ರಿವಿಧ ದಾಸ್ಸೋಹದಿಂದ ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿದ್ದು ಒಕ್ಕಲಿಗ ಗೌಡ ಸಮುದಾಯದ ಪ್ರಬಲ ಮಠ ಶ್ರೀ ಆದಿಚುಂಚನಗಿರಿ. ಅಲ್ಲಿನ ಪರಮ ಪೂಜ್ಯ ಸ್ವಾಮೀಜಿ ಭೈರವೈಕ್ಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ದೂರದೃಷ್ಟಿ ಲಕ್ಷಾಂತರ ಜನರ ಬಾಳಲ್ಲಿ ಬೆಳಕಾಗಿದೆ. ಇಂತಹ ಪ್ರಬಲ ಸಮುದಾಯವನ್ನು ಭಾವನೆಗಳಿಗೆ ಧಕ್ಕೆಯಾಗುವಂತೆ ಬಳಸಿಕೊಂಡಿದ್ದಕ್ಕೆ ಟೀಕೆಗಳು ವ್ಯಕ್ತವಾಗಿದೆ.
“ನಮಸ್ತೆ, ನಾವು ಮಾಡಿರುವಂತಹ ಹಾಡು ಯಾರನ್ನೂ ನೋಯಿಸುವ ಉದ್ದೇಶದಿಂದ ಮಾಡಿರುವ ಹಾಡಲ್ಲ. ಆ ಆಳು ಮರಗೆಲಸಕ್ಕೆ ಬಂದಿಲ್ಲಾ ಅಂದ್ರೆ ಆಗುವ ಸಮಸ್ಯೆಯ ಬಗ್ಗೆ ಅರ್ಥೈಸುವಂತೆ ಬರೆದಿರುವ ಸಾಹಿತ್ಯ.
ಶಿರಸಿ-ಸಿದ್ದಾಪುರ-ಯಲ್ಲಾಪುರ- ಸಾಗರ ಕಡೆ, ಅಡಿಕೆ ಮರ ಹತ್ತಿ ಗೊನೆಗೆ ಔಷಧ ಸಿಂಪಡಣೆ ಮಾಡುವ ಮತ್ತು ಗೊನೆ ಕೊಯ್ಯುವ ಕೌಶಲ್ಯ ಹೊಂದಿರುವಂತಹ ಆಳುಗೆ (ಅವರು ಯಾವುದೇ ಸಮುದಾಯದವರಾಗಿರ್ಲಿ ) ಅವರಿಗೆ ಗೌಡ ಅಂತ ಕರಿಯೊ ವಾಡಿಕೆ. ಅದೇ ಪದವನ್ನು ಉಪಯೋಗಿಸಿದ್ದೆ ಹೊರತು ಇನ್ಯಾವ ಉದ್ದೇಶಕಲ್ಲ. ನಿಜವಾಗಿನೂ ಅವರು ನಮ್ಮ ಜೀವನದ ಒಂದು ಭಾಗ ಮತ್ತು ಅವರನ್ನ ಮನೆಯವರಂತೆ ಆತ್ಮೀಯತೆಯಿಂದ ನಾವು ನೋಡ್ತಿವಿ.
ಈ ಹಾಡಿನಿಂದ ನೋವಾದರೆ ಕ್ಷಮೆ ಯಾಚಿಸುತ್ತೇವೆ. ಧನ್ಯವಾದಗಳು” ಇದಿಷ್ಟು ಅನಾಮಿಕ ವ್ಯಕ್ತಿಯೊಬ್ಬರು ನ್ಯೂಸ್ ನಾಟೌಟ್ ವೆಬ್ಸೈಟ್ ಗೆ [email protected] ನಿಂದ ಕಳಿಸಿದ್ದಾರೆ.