ನ್ಯೂಸ್ ನಾಟೌಟ್: ಗ್ರಾಮಸ್ಥನ ಪ್ರಶ್ನೆಗಳ ಸುರಿಮಳೆಗೆ ತಲೆ ತಿರುಗಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಯುವ ವೈದ್ಯೆಗೆ ಗರ್ಭಪಾತವಾಗಿದೆ ಅನ್ನುವ ಆಘಾತಕಾರಿ ವಿಚಾರ ಹೊರಬಿದ್ದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ದ.ಕ ಜಿಲ್ಲಾ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಇಬ್ಬರ ವಿರುದ್ಧ ಪೊಲೀಸ್ ದೂರು ದಾಖಲಿಸಿದೆ.
ಗ್ರಾಮಸ್ಥರ ಮಾನಸಿಕ ಒತ್ತಡದಿಂದ ನೆಲ್ಯಾಡಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಗರ್ಭಿಣಿ ಡಾ.ಶಿಶಿರಾ ಅವರಿಗೆ ಗರ್ಭಪಾತವಾಗಿದೆ ಅನ್ನುವ ದೂರು ದಾಖಲಾಗಿದೆ. ಮಾನಸಿಕ ಹಿಂಸೆ ನೀಡಿರುವ ಗ್ರಾಮಸ್ಥರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ದೂರು ದಾಖಲಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಡೀಕಯ್ಯ ಪೂಜಾರಿ ಮತ್ತು ಗಣೇಶ್ ವಿರುದ್ದ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದ.ಕ ಜಿಲ್ಲೆಯ ಕಡಬ ತಾಲೂಕಿನ ಗೋಳಿತೊಟ್ಟು ಗ್ರಾ.ಪಂ ನಲ್ಲಿ ಅ.9ರಂದು ಗ್ರಾಮ ಸಭೆ ನಡೆದಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಡಾ.ಶಿಶಿರಾ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾಳೆ ಅನ್ನುವ ದೂರು ಸಭೆಯಲ್ಲಿ ಕೇಳಿ ಬಂದಿತ್ತು. ಈ ವೇಳೆ ಡಾ.ಶಿಶಿರಾ ಉತ್ತರ ನೀಡಿದರು. ಇದಕ್ಕೆ ಡೀಕಯ್ಯ ಪೂಜಾರಿ ಮತ್ತು ಗಣೇಶ್ ಸಂತೃಪ್ತರಾಗದೆ ಮತ್ತಷ್ಟು ಗದ್ದಲ ಎಬ್ಬಿಸಿದರು. ಈ ವೇಳೆ ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಡಾ.ಶಿಶಿರಾ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು.
ದೂರಿನಲ್ಲಿ ಏನಿದೆ..?
ಗ್ರಾಮಸಭೆಯಲ್ಲಿ ವೈದ್ಯಾಧಿಕಾರಿಗೆ ಮಾನಸಿಕ ಒತ್ತಡ ಮತ್ತು ಹಿಂಸೆ ಆರೋಪಿಸಿ ದೂರು ದಾಖಲಿಸಲಾಗಿದೆ. ಗ್ರಾಮಸ್ಥರ ವಿರುದ್ದ ಪೊಲೀಸ್ ದೂರು ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಕ್ರಮಕ್ಕೆ ಆಗ್ರಹಿಸಿದೆ.
ಹೇಗಿದೆ ಶಿಶಿರಾ ಪರಿಸ್ಥಿತಿ..?
ಶಿಶಿರ ಅವರು ತಲೆ ತಿರುಗಿ ಬಿದ್ದ ಬಳಿಕ ಅವರನ್ನು ತುರ್ತಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಗರ್ಭಪಾತವಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸದ್ಯ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ತಿಳಿದು ಬಂದಿದೆ.