ನ್ಯೂಸ್ ನಾಟೌಟ್ : ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿ ದೇಶದ ಡಿಜಿಟಲ್ ಮೂಲಸೌಕರ್ಯ ವ್ಯವಸ್ಥೆಯನ್ನು ಹಾಡಿ ಹೊಗಳಿದೆ.ಹೌದು, ಜಿ-20 ಶೃಂಗಸಭೆಗಾಗಿ ಬೆಂಗಳೂರಿಗೆ ಆಗಮಿಸಿರುವ ಜರ್ಮನಿಯ ಸಚಿವರೊಬ್ಬರು ರಸ್ತೆಬದಿ ತರಕಾರಿ ಖರೀದಿ ಮಾಡಿ ಯುಪಿಐ ಮೂಲಕ ಹಣ ಪಾವತಿ ಮಾಡಿದ್ದಾರೆ..!
ಜರ್ಮನಿಯ ಡಿಜಿಟಲ್ ಮತ್ತು ಸಾರಿಗೆ ಇಲಾಖೆ ಸಚಿವ ವೋಲ್ಕರ್ ವಿಸ್ಸಿಂಗ್ ಅವರು ಭಾರತದಲ್ಲಿ ಹಣ ವಹಿವಾಟುಗಳನ್ನು ಮಾಡಲು ಯುಪಿಐ ಅನ್ನು ಬಳಸಿದರು. ಯುಪಿಐ ಹಣ ವರ್ಗಾವಣೆ ಅನುಭವದಿಂದ ಅವರು ಆಕರ್ಷಿತರಾಗಿದ್ದು, ಭಾರತದ ಡಿಜಿಟಲ್ ಪಾವತಿ ಮಾದರಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಇದೊಂದು ದೇಶದ ಯಶಸ್ವಿ ಕಥೆಗಳಲ್ಲಿ ಒಂದು ಎಂದು ಬಣ್ಣಿಸಿದ್ದು, ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿಯು ಸಚಿವ ವೋಲ್ಕರ್ ವಿಸ್ಸಿಂಗ್ ಯುಪಿಐ ಬಳಸುತ್ತಿರುವ ವಿಡಿಯೋ ಮತ್ತು ಕೆಲವು ಫೋಟೋಗಳನ್ನು ಟ್ವೀಟ್ ಮೂಲಕ ಹಂಚಿಕೊಳ್ಳಲಾಗಿದೆ.ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿದ್ದಾರೆ.ಈ ಬಗ್ಗೆ ಟ್ವೀಟ್ ಮೂಲಕ ಹೇಳಿಕೆ ನೀಡಿದ ಭಾರತದಲ್ಲಿನ ಜರ್ಮನ್ ರಾಯಭಾರ ಕಚೇರಿ ‘ಭಾರತದ ಯಶಸ್ಸಿನ ಕಥೆಗಳಲ್ಲಿ ಡಿಜಿಟಲ್ ಮೂಲಸೌಕರ್ಯವೂ ಒಂದು. ಯುಪಿಐ ಪ್ರತಿಯೊಬ್ಬರಿಗೂ ಸೆಕೆಂಡುಗಳಲ್ಲಿ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತಿದೆ. ಲಕ್ಷಾಂತರ ಭಾರತೀಯರು ಇದನ್ನು ಬಳಸುತ್ತಿದ್ದು, ಡಿಜಿಟಲ್ ಮತ್ತು ಸಾರಿಗೆ ಇಲಾಖೆ ಸಚಿವ ವೋಲ್ಕರ್ ವಿಸ್ಸಿಂಗ್ ಯುಪಿಐ ಅನ್ನು ಬಳಕೆ ಮಾಡಿದ್ದಾರೆ. ಯುಪಿಐ ಪಾವತಿಗಳ ಸ್ವಅನುಭವ ಪಡೆದ ಅವರು ಇದರಿಂದ ಆಕರ್ಷಿತರಾಗಿದ್ದಾರೆ’ ಎಂದು ಬರೆದುಕೊಂಡಿದೆ.
ಆಗಸ್ಟ್ 19 ರಂದು ಬೆಂಗಳೂರಿನಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಸಚಿವ ವೋಲ್ಕರ್ ವಿಸ್ಸಿಂಗ್ ಭಾಗವಹಿಸಿದ್ದರು.ಹೀಗಾಗಿ ಈ ಎಲ್ಲಾ ಸುಂದರ ಅನುಭವಗಳನ್ನು ಅವರು ಪಡೆದರು.ಸಚಿವ ವಿಸ್ಸಿಂಗ್ ಮತ್ತು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ನಮ್ಮ ಡಿಜಿಟಲ್ ಸಂವಾದದ ಮೂಲಕ ಐಟಿ ಮತ್ತು ವಿಶೇಷವಾಗಿ ಎಐನಲ್ಲಿ ಭಾರತ ಮತ್ತು ಜರ್ಮನ್ ಸಹಕಾರವನ್ನು ಭದ್ರಗೊಳಿಸುವ ಬಗ್ಗೆ ಪ್ರಾಯೋಗಿಕ ಚರ್ಚೆಯನ್ನೂ ಕೂಡ ಮಾಡಲಾಗಿದೆ.
ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಎಂಬುದು ಭಾರತದಲ್ಲಿ ಆವಿಷ್ಕರಿಸಲಾದ ಮೊಬೈಲ್ ಆಧಾರಿತ ವೇಗದ ಪಾವತಿ ವ್ಯವಸ್ಥೆಗಳಲ್ಲಿ ಒಂದು . ಇದು ಗ್ರಾಹಕರಿಗೆ ಅತೀ ವೇಗ ಹಾಗೂ ದಿನದ 24 ಗಂಟೆಯೂ ತ್ವರಿತ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಇದನ್ನು ಹೆಚ್ಚಿನ ಗ್ರಾಹಕರು ಉಪಯೋಗಿಸಿಕೊಳ್ಳುತ್ತಿದ್ದು, ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ, ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರ್ ಸೇರಿದಂತೆ ಇತರೆ ದೇಶಗಳು ಪಾವತಿ ಪರಿಹಾರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿವೆ.
ಭಾರತ ಮತ್ತು ಸಿಂಗಾಪುರ ತಮ್ಮ ಪಾವತಿ ವ್ಯವಸ್ಥೆಗಳನ್ನು ಸಂಪರ್ಕಿಸಲು 2023 ರ ಫೆಬ್ರವರಿಯಲ್ಲಿ ಅಭೂತಪೂರ್ವ ಒಪ್ಪಂದಕ್ಕೆ ಸಹಿ ಹಾಕಿತ್ತು. ಯುಪಿಐ ಪಾವತಿ ಕಾರ್ಯವಿಧಾನವನ್ನು ಬಳಸಲು ಭಾರತ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ ಎಂದು ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.