ನ್ಯೂಸ್ನಾಟೌಟ್: ಬಸ್ಸಿನ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಹತ್ತಿಸುವಂತೆ ಹೇಳಿದ್ದಕ್ಕೆ ಆಗಲ್ಲ ಎಂದ ಸರ್ಕಾರಿ ಬಸ್ನ ನಿರ್ವಾಹಕನ ಜತೆ ಮಹಿಳಾ ಪ್ರಯಾಣಿಕರು ವಾಗ್ವಾದಕ್ಕಿಳಿದ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕೆಸ್ಸಾರ್ಟಿಸಿ ಬಸ್ ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೊರಟಿತ್ತು. ಈ ಸಂದರ್ಭ ಉತ್ತರ ಕರ್ನಾಟಕದಿಂದ ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿರುವ ಮಹಿಳೆಯರ ತಂಡ ಎಲ್ಲರೂ ಬಸ್ ಹತ್ತಲು ಮುಂದಾದರು. ಆಗ ಮೊದಲೇ ಬಸ್ ಪ್ರಯಾಣಿಕರಿಂದ ತುಂಬಿದ್ದು, ಬೇರೆ ಬಸ್ನಲ್ಲಿ ಹೋಗಿ ಎಂದಾಗ ಮಹಿಳೆಯರು ಕಂಡೆಕ್ಟರ್ ಜತೆ ವಾಗ್ವಾದಕ್ಕಿಳಿದಿದ್ದಾರೆ.
ಮಹಿಳೆಯರು ಕಂಡೆಕ್ಟರ್ ಜತೆ ವಾಗ್ವಾದಕ್ಕಿಳಿದು ಹೇ….ಯಪ್ಪಾ…. ಮೊದ್ಲು ನೆಟ್ಟಗೆ ಮಾತಾಡು ಎಂದಾಗ ಕಂಡೆಕ್ಟರು ಕೂಡ… ಹೇ… ನೀನು ನೆಟ್ಟಗೆ ಮಾತಾಡಮ್ಮ ಎಂದಿದ್ದಾರೆ. ಅಲ್ಲದೇ ಕಂಡಕ್ಟರ್ ಜೊತೆ ಕೈ ಕೈ ತೋರಿಸಿ ಮಾತಿನ ಸಮರಕ್ಕಿಳಿದ ಮಹಿಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಸ್ ಪೂರ್ತಿ ಪ್ರಯಾಣಿಕರಿಂದ ತುಂಬಿತ್ತು. ಉಚಿತ ಬಸ್ ಪ್ರಯಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರಿದ್ದರು. 60 ಸೀಟಿನ ಸರ್ಕಾರಿ ಬಸ್ಸಲ್ಲಿ, 190 ಜನ ಪ್ರಯಾಣಿಕರು ತುಂಬಿದ್ದರು. ಪುರುಷ ಪ್ರಯಾಣಿಕರು ಬಸ್ನಲ್ಲಿ ನಿಂತುಕೊಂಡು, ಫುಟ್ಬೋರ್ಡ್ನಲ್ಲಿ ನೇತಾಡುತ್ತಿದ್ದರು. ಧಾರ್ಮಿಕ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿರುವ ಮಹಿಳಾ ಪ್ರಯಾಣಿಕರು ತಮ್ಮ ಜತೆ ಬಂದಿರುವ ಎಲ್ಲರನ್ನು ಹತ್ತಿಸುವಂತೆ ದುಂಬಾಲು ಬಿದ್ದಿದ್ದರು. ಬಸ್ಸಿನಲ್ಲಿ ನಿಲ್ಲುವುದಕ್ಕೂ ಜಾಗ ಇಲ್ಲ, ಬೇರೆ ಬಸ್ಸಿನಲ್ಲಿ ಹೋಗಿ ಎಂದಾಗ ಕಂಡೆಕ್ಟರ್ ಜತೆ ಮಾತಿನ ಚಕಮಕಿ ನಡೆಯಿತು.