ನ್ಯೂಸ್ ನಾಟೌಟ್: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವ್ಯಾಪಿಯಾಗಿ ಸದ್ದಾಗುತ್ತಿದೆ. ಕೊಲೆ ಮತ್ತು ಅತ್ಯಾಚಾರದ ಹಿಂದಿರುವ ಕಾಣದ ಕೈಗಳನ್ನು ಬಂಧಿಸಬೇಕೆಂಬ ಕೂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹಲವಾರು ಮಂದಿ ಸೌಜನ್ಯ ಪರ ಹೃದಯಾಂತರಾಳದಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಈ ಪ್ರಕರಣದಲ್ಲಿ ನನಗೇನಾದರೂ ಲಾಭ ಆಗುತ್ತಾ..? ಅನ್ನೋ ಲೆಕ್ಕಾಚಾರದಲ್ಲಿ ತೊಡಗಿರೋದು ವಿಪರ್ಯಾಸ..!
ಸಾಮಾಜಿಕ ವಲಯದಲ್ಲಿ ಇಂಥಹದ್ದೊಂದು ವಿಚಾರದ ಬಗೆಗಿನ ಚರ್ಚೆ ಜೋರಾಗಿದೆ. ಸೌಜನ್ಯ ಪ್ರಕರಣದಲ್ಲಿ ಕೆಲವರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರಾ..? ನಿಮಗೂ ಹಾಗೆ ಏನಾದರೂ ಅನಿಸುತ್ತಿದೆಯಾ..? ನಕಲಿ ಯಾರು..? ಅಸಲಿ ಯಾರು..? ಅನ್ನೋ ಪ್ರಶ್ನೆಯನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ. ಈ ಬಗ್ಗೆ ಕಾಮೆಂಟ್ ಮಾಡೋ ಮೂಲಕ ನಿಮ್ಮ ಅಭಿಪ್ರಾಯಗಳನ್ನ ನಮ್ಮ ಜೊತೆ ಶೇರ್ ಮಾಡಿ.
ಸೌಜನ್ಯ ಅನ್ನೋ ಹೆಸರನ್ನು ಕೇಳಿದಾಗ ಮೊದಲು ನೆನಪಾಗೊ ಹೆಸರೇ ಮಹೇಶ್ ಶೆಟ್ಟಿ ತಿಮರೋಡಿ. ಅಂದಿನಿಂದ ಇಂದಿನವರೆಗೆ ಒಂದೇ ನಡೆ… ಒಂದೇ ನುಡಿ. ಹಗಲು-ರಾತ್ರಿ ಅನ್ನದೆ ಜೀವದ ಹಂಗನ್ನೂ ತೊರೆದು, ಕಷ್ಟನಷ್ಟಗಳ ಮೆಟ್ಟಿಲನ್ನೇ ತುಳಿದು ನಿಂತ ನಾಯಕ. ಅದು ವನ್ ಅಂಡ್ ಒನ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮಾತ್ರ. ಅಂದು ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಪರ ಧ್ವನಿ ಎತ್ತದೇ ಹೋಗಿರುತ್ತಿದ್ದರೆ ಇಂದು ಇಷ್ಟೊತ್ತಿಗೆ ಸೌಜನ್ಯ ಪ್ರಕರಣವೇ ಹಳ್ಳ ಹಿಡಿದಿರುತ್ತಿತ್ತು. ಈ ಕೇಸ್ ಇಂದಿಗೂ ಜೀವಂತವಾಗಿದೆ ಅಂದ್ರೆ ಅದಕ್ಕೆ ಮಹೇಶ್ ಶೆಟ್ಟಿ ತಿಮರೋಡಿ ಮುಖ್ಯ ಕಾರಣ.
ಹೌದು, ಕರಾವಳಿಯಲ್ಲಿ ಆರಂಭವಾಗಿರುವ ಸೌಜನ್ಯ ನ್ಯಾಯದ ಕೂಗು ರಾಜ್ಯವ್ಯಾಪಿ ವಿಸ್ತರಿಸುತ್ತಿದೆ. ದೇಶವ್ಯಾಪಿಯಾಗುವತ್ತ ಸಾಗಿದೆ. ಮುಂಬೈನಲ್ಲೂ ಸೌಜನ್ಯ ನ್ಯಾಯಕ್ಕಾಗಿ ಹೋರಾಟಕ್ಕೆ ಸಿದ್ಧತೆ ನಡೆದಿದೆ. ಇತ್ತೀಚೆಗೆ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಸುಳ್ಯದಲ್ಲಿ ಸೌಜನ್ಯಳಿಗೆ ನ್ಯಾಯಕ್ಕಾಗಿ ಕಾಲ್ನಡಿಗೆ ಜಾಥಾ ನಡೆದಿತ್ತು. ಎಂಟು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ತಿಮರೋಡಿ ಮುಂದಿನ ನೂರು ವರ್ಷವಾದರೂ ಈ ಪ್ರಕರಣವನ್ನ ಜೀವಂತವಾಗಿಡುತ್ತೇವೆ ಎಂದು ಅಬ್ಬರಿಸಿದ್ದರು. ಇಂತಹ ಅಬ್ಬರವನ್ನು ಮಹೇಶ್ ಶೆಟ್ಟಿ ತಿಮರೋಡಿಯಿಂದ ಮಾತ್ರ ನಿರೀಕ್ಷಿಸಲು ಸಾಧ್ಯ.
ಇದು ಸೌಜನ್ಯ ಪ್ರಕರಣದ ಒಂದು ಮುಖವಾದರೆ ಮತ್ತೊಂದು ಮುಖ ನಕಲಿ ನಾಯಕರ ಗಿಮಿಕ್ ತಂತ್ರ..! ಮುಂಬರುವ ಲೋಕಸಭಾ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು ಸೌಜನ್ಯ ಪ್ರಕರಣವನ್ನ ಮುಂದಿಟ್ಟುಕೊಂಡು ಬೀದಿಗೆ ಇಳಿದೇ ಬಿಟ್ಟಿದ್ದಾರೆ. ಯಾರ ಹೆಸರನ್ನು ಹೇಳುವ ಧೈರ್ಯವೂ ಇವರಿಗಿಲ್ಲ. ಕನಿಷ್ಟ ಸೌಜನ್ಯ ಕುಟುಂಬವನ್ನು ಪ್ರತಿಭಟನೆಗೆ ಸೇರಿಸುವ ಶಕ್ತಿಯೂ ಇಲ್ಲ. ಒಟ್ಟಿನಲ್ಲಿ ಸೌಜನ್ಯಳ ಫೋಟೋ ಹಿಡಿದು ರಸ್ತೆಯಲ್ಲಿ ನಾಲ್ಕು ಘೋಷಣೆ ಕೂಗುವುದು, ವಾಪಸ್ ಮನೆಗೆ ಹೋಗೋದು.
ಇದೆಲ್ಲ ಒಂದು ಪ್ರತಿಭಟನೆ. ಇಂತಹ ಪ್ರತಿಭಟನೆಗಳಿಂದ ಸೌಜನ್ಯಳಿಗೆ ನ್ಯಾಯ ಸಿಗಬಹುದೇ..? ಇದು ಯಾರನ್ನು ಮೆಚ್ಚಿಸೋಕೆ ಮಾಡುವ ಪ್ರತಿಭಟನೆ..? ಇದನ್ನು ಅರ್ಥ ಮಾಡಿಕೊಳ್ಳದಷ್ಟು ಮೂರ್ಖರು ನಮ್ಮ ಜನರಲ್ಲ. ಇಂದು ಸಾಮಾಜಿಕ ಜಾಲತಾಣ ಬೆಳೆದಿದೆ. ಜನ ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಅನ್ನುವ ರಾಜಕೀಯ ನಾಯಕರ ನಿಲುವು ಹೇಸಿಗೆ ತರುವಂತಿದೆ.
ಸೌಜನ್ಯ ಕುಟುಂಬವನ್ನೇಕೆ ಸೇರಿಸಲ್ಲ..?
ರಾಜ್ಯದ ವಿವಿಧ ಕಡೆ ಸೌಜನ್ಯ ಕುಟುಂಬಸ್ಥರು ಪ್ರತಿಭಟನೆಗೆ ಕರೆದ ಕಡೆ ಎಲ್ಲ ಹೋಗಿದ್ದಾರೆ. ಯಾರ ಹತ್ತಿರವೂ ನಾವು ಬರೋದಿಲ್ಲ ಎಂದು ಹೇಳಿಲ್ಲ. ಎಲ್ಲ ಕಡೆ ಅವರಿಗೆ ಮಾತನಾಡೋಕೆ ವೇದಿಕೆಯ ಅವಕಾಶವೂ ಸಿಕ್ಕಿದೆ. ಆದರೆ ಕೆಲವರು ಪ್ರತಿಭಟನೆಯನ್ನು ಹಮ್ಮಿಕೊಳ್ತಾರೆ ಕಾಟಾಚಾರಕ್ಕೆ ಕುಟುಂಬದವರನ್ನು ಆಹ್ವಾನಿಸುತ್ತಾರೆ. ಪ್ರತಿಭಟನೆಯಲ್ಲಿ ಸೌಜನ್ಯ ತಾಯಿಗೆ ಒಂದು ಮಾತಾನಾಡೋಕೆ ಅವಕಾಶ ಇಲ್ಲ ಅಂತಾರೆ. ಹಾಗಿದ್ದ ಮೇಲೆ ಸೌಜನ್ಯ ತಾಯಿ ಅಂತಹ ಪ್ರತಿಭಟನೆಗಳಲ್ಲಿ ಭಾಗವಹಿಸುವ ಅವಶ್ಯಕತೆ ಏನಿದೆ? ಎಂದು ಜನ ಇಂದು ಪ್ರಶ್ನಿಸುತ್ತಿದ್ದಾರೆ.
ಯಾರ ಬೇಳೆ ಬೇಯಬಹುದು..?
ಕೆಲವರಿಗೆ ಸೌಜನ್ಯ ಹೆಸರಿನಲ್ಲಿ ಪ್ರತಿಭಟನೆ ಬೇಕು, ಸೌಜನ್ಯ ತಾಯಿಯ ಕೂಗು ಬೇಕಿಲ್ಲ. ಹೀಗಾಗಿ ಸೌಜನ್ಯ ತಾಯಿ ಬಾರದಿದ್ದರೇ ಒಳ್ಳೆಯದು ಅನ್ನುವ ರೀತಿಯಲ್ಲಿ ಕೆಲವರ ಸ್ವಾರ್ಥ ವರ್ತನೆ ಬಟಾಬಯಲಾಗಿದೆ. ಈ ಬಗ್ಗೆ ಜನ ಈಗ ಗುಸುಗುಸು ಆರಂಭಿಸಿದ್ದಾರೆ. ಈ ನಾಟಕದ ಕ್ಲೈ ಮ್ಯಾಕ್ಸ್ ದಿನಗಳು ಇನ್ನು ಹೆಚ್ಚು ದಿನ ದೂರವಿಲ್ಲ. ನಕಲಿ ಹೋರಾಟಗಳಿಗೆ ಬ್ರೇಕ್ ಬೀಳುವ ದಿನಗಳು ಸನ್ನಿಹಿತವಾಗಿದೆ. ಮುಂದಿನ ಚುನಾವಣೆಯಲ್ಲಿ ನಿಂತರೆ ಪರಿಣಾಮಗಳನ್ನು ನೇರವಾಗಿ ಅನುಭವಿಸಲಿದ್ದಾರೆ ಅನ್ನೋದು ಜನರ ಅಭಿಪ್ರಾಯ.
ತಿಮರೋಡಿಯನ್ನ ದೂರವಿಡೋದೇಕೆ..?
ಹಿಂದೂ ಸಮಾಜದೊಳಗೆ ಒಗ್ಗಟ್ಟಿಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬಾಯಲ್ಲಿ ಮಾತ್ರ ಹಿಂದೂ ..ಹಿಂದೂ…ನಾವೆಲ್ಲ ಒಂದು ಅನ್ನುವ ನಾಯಕರು ತಮ್ಮ ಸ್ವಾರ್ಥಕ್ಕಾಗಿ ಏನನ್ನು ಮಾಡುವುದಕ್ಕೂ ಹೇಸುವುದಿಲ್ಲ. ಉದಾಹರಣೆಗೆ ಸೌಜನ್ಯ ಪ್ರಕರಣದ ಪ್ರತಿಭಟನೆಯಲ್ಲಿ ಹಿಂದೂ ನಾಯಕ ತಿಮರೋಡಿಯನ್ನು ದೂರವಿಡುವುದರ ಹಿಂದೆ ಕೆಲವು ರಾಜಕೀಯ ನಾಯಕರ ‘ಧರ್ಮ ಸಂಕಟ’ ಅಡಗಿದೆ ಎಂದೇ ಹೇಳಲಾಗುತ್ತಿದೆ.
ತಿಮರೋಡಿ ಬಂದ್ರೆ ಅಥವಾ ಸೌಜನ್ಯ ತಾಯಿ ಬಂದ್ರೆ ಎಲ್ಲಿ ಏನು ಮಾತನಾಡುತ್ತಾರೋ.. ಯಾರಿಗೆಲ್ಲ ಬೇಸರವಾಗುತ್ತದೋ ಅನ್ನೋ ‘ಧರ್ಮ ಸಂಕಟ’. ಈ ‘ಧರ್ಮ ಸಂಕಟ’ದಿಂದ ಪಾರಾಗಲೂ ಬೇಕು, ಮುಂದಿನ ಚುನಾವಣೆಯಲ್ಲಿ ನಿಂತ್ರೆ ಓಟು ಸಿಗಲೂ ಬೇಕು. ಅದೇನೋ ಹೇಳ್ತಾರಲ್ಲ ‘ಹಾವು ಸಾಯಲೂ ಬಾರದು, ಕೋಲು ಮುರಿಯಲೂ ಬಾರದು’ ಹಾಗೆ ಕೆಲವು ನಾಯಕರ ವರ್ತನೆ ಕಾಣ್ತಿದೆ. ಸ್ವಾರ್ಥ ತುಂಬಿದ ಮನಸ್ಸಿನಿಂದ ಪ್ರತಿಭಟನೆಗೆ ಇಳಿಯುವ ನಮ್ಮ ನಕಲಿ ನಾಯಕರ ನಡೆ ಎಂದು ಬದಲಾಗುವುದೋ ಆ ಶಿವನಿಗೇ ಗೊತ್ತು..? ಇದೆಲ್ಲದಕ್ಕೂ ಉತ್ತರ ನೀಡೋಕೆ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸರ್ವ ಸನ್ನದ್ಧರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಒಂದೊಳ್ಳೆ ಉತ್ತರ ನೀಡುವ ನಿರೀಕ್ಷೆ ಇದೆ.