ನ್ಯೂಸ್ ನಾಟೌಟ್ : ಮರದಿಂದ ಕೆಳಗೆ ಬಿದ್ದು ಪೊಲೀಸ್ ಸಿಬ್ಬಂದಿಯೊಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಮಡಿಕೇರಿಯ ಕುಶಾಲನಗರ ತಾಲೂಕಿನ ಕಾನ್ಬೈಲ್ ಗ್ರಾಮದಲ್ಲಿ ನಡೆದಿದೆ.ಇವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ 10 ವರ್ಷಗಳಿಗೂ ಹೆಚ್ಚು ಕಾಲ ಗನ್ ಮ್ಯಾನ್ ಆಗಿದ್ದರು ಎಂದು ತಿಳಿದು ಬಂದಿದೆ.
ಲೋಕೇಶ್ (40) ಮೃತ ದುರ್ದೈವಿ. ಮಾವಿನ ಮರ ಕಸಿಮಾಡಲು ಮರ ಏರಿದ್ದ ಸಮಯದಲ್ಲಿ ರಕ್ತದೊತ್ತಡ (ಬಿಪಿ) ಕಡಿಮೆಯಾಗಿ ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್ಗೆ ಬಿದ್ದಿದ್ದಾರೆ ಎನ್ನಲಾಗಿದೆ.ಪರಿಣಾಮ ಲೋಕೇಶ್ ಮೃತಪಟ್ಟಿದ್ದಾರೆ.
ಮೃತ ಲೋಕೇಶ್ ಅವರು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.ಜನರ ನೋವುಗಳಿಗೆ ತಕ್ಷಣ ಸ್ಪಂದಿಸುತ್ತಿದ್ದ ಇವರು ಕೊಡಗಿನ ದುರಂತದ ಸಮಯದಲ್ಲಿ ಹಲವರಿಗೆ ನೆರವಾಗಿದ್ದರು ಎನ್ನಲಾಗಿದೆ.ಇದೀಗ ಇವರ ನಿಧನದ ಸುದ್ದಿ ಕೇಳಿ ಅಪ್ಪಚ್ಚು ರಂಜನ್ ಕಂಬನಿ ಮಿಡಿದಿದ್ದಾರೆ.ಮೃತದೇಹವನ್ನು ಮಡಿಕೇರಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಅಪ್ಪಚ್ಚು ರಂಜನ್ ಹಾಗೂ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಅಪ್ಪಚ್ಚು ರಂಜನ್ ಅವರು ಕಣ್ಣೀರು ಹಾಕಿದ್ದು,ದುಖಃದಿಂದಲೇ ಮಾತನಾಡಿದ್ದಾರೆ. ಎಲ್ಲ ಕೆಲಸದಲ್ಲೂ ಲೋಕೇಶ್ ನನ್ನೊಂದಿಗೆ ಇರುತ್ತಿದ್ದ. ಕೊಡಗಿನಲ್ಲಾದ ಪ್ರಕೃತಿ ವಿಕೋಪದ ಸಮಯದಲ್ಲೂ ಧೈರ್ಯದಿಂದ ಮುನ್ನುಗುತ್ತಿದ್ದ. ಸಣ್ಣ ವಯಸ್ಸಿನಲ್ಲೇ ಹೀಗಾಗಿದ್ದು ಬಹಳ ನೋವಿನ ವಿಚಾರವಾಗಿದೆ ಎಂದು ಹೇಳಿದರು.