ನ್ಯೂಸ್ ನಾಟೌಟ್: ರಾಜ್ಯದಲ್ಲಿ ಆನೆಗಳು ಮತ್ತು ಮನುಷ್ಯನ ನಡುವಿನ ಸಂಘರ್ಷದ ಬಗ್ಗೆ ನೀವು ಕೇಳಿದ್ದೀರಿ. ಆನೆಗಳು ಬಂದು ಅಲ್ಲಿ ದಾಳಿ ಮಾಡಿವೆಯಂತೆ ಇಲ್ಲಿ ದಾಳಿ ಮಾಡಿದೆಯಂತೆ ಸಾಕಷ್ಟು ನಷ್ಟವಾಗಿದೆಯಂತೆ ಅಂತ ದೂರುಗಳು ಬರುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಈ ನಡುವೆ ಕರ್ನಾಟಕದಲ್ಲಿ ಅತೀ ಹೆಚ್ಚು ಆನೆಗಳಿವೆ, ದೇಶದಲ್ಲೇ ನಂ.1 ಆನೆಗಳಿವೆ ಅನ್ನುವ ಸ್ಫೋಟಕ ಸುದ್ದಿ ಹೊರ ಬಿದ್ದಿದೆ.
2023ರ ಮೇ ತಿಂಗಳಿನಲ್ಲಿ ನಡೆದ ಆನೆ ಗಣತಿಯಲ್ಲಿ ಕರ್ನಾಟಕದಲ್ಲಿ 6,395 ಆನೆಗಳಿರುವುದು ಕಂಡು ಬಂದಿದೆ. ಆನೆಗಳ ಸಂಖ್ಯೆಯಲ್ಲಿ ರಾಜ್ಯವು ದೇಶದಲ್ಲೇ ಅಗ್ರಸ್ಥಾನ ಪಡೆದಿದೆ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು.
ಆನೆ ಗಣತಿ ವರದಿಯ ಮುಖ್ಯಾಂಶಗಳನ್ನು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘2017ರಲ್ಲಿ ನಡೆದ ಗಣತಿ ಪ್ರಕಾರ, ರಾಜ್ಯದಲ್ಲಿ 6,049 ಆನೆಗಳಿದ್ದವು. ಆರು ವರ್ಷಗಳ ಬಳಿಕ ಕಳೆದ ಮೇ 17 ರಿಂದ 19ರವರೆಗೆ ಗಣತಿ ನಡೆಸಲಾಗಿದೆ. ರಾಜ್ಯದಲ್ಲಿ ಆನೆಗಳ ಸಂಖ್ಯೆಯಲ್ಲಿ 346ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ’ ಎಂದರು
ರಾಜ್ಯದ 32 ವನ್ಯಜೀವಿ ವಿಭಾಗಗಳಲ್ಲಿ ನಡೆದ ಗಣತಿಯಲ್ಲಿ ಇಲಾಖೆಯ 3,400 ಸಿಬ್ಬಂದಿ ಪಾಲ್ಗೊಂಡಿದ್ದರು. 23 ವನ್ಯಜೀವಿ ವಿಭಾಗಗಳಲ್ಲಿ ಆನೆಗಳು ಇರುವುದು ದೃಢಪಟ್ಟಿದೆ. 6,104 ಚದರ ಕಿಲೋಮೀಟರ್ ಪ್ರದೇಶದಲ್ಲಿ ಆನೆ ಗಣತಿ ನಡೆಸಲಾಗಿದೆ. ಗಣತಿ ದಿನಗಳಲ್ಲಿ 2,219 ಆನೆಗಳನ್ನು ನೇರವಾಗಿ ಎಣಿಕೆ ಮಾಡಲಾಗಿತ್ತು ಎಂದು ಖಂಡ್ರೆ ವಿವರಿಸಿದರು.
ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಆನೆ ಗಣತಿ ನೇತೃತ್ವ ವಹಿಸಿದ್ದವು. ಆಂಧ್ರಪ್ರದೇಶದಲ್ಲೂ ಇದೇ ಅವಧಿಯಲ್ಲಿ ಗಣತಿ ನಡೆದಿದೆ. ಗಣತಿಯ ವಿನ್ಯಾಸ, ಸಿಬ್ಬಂದಿಗೆ ತರಬೇತಿ, ಫಲಿತಾಂಶಗಳ ವಿಶ್ಲೇಷಣೆ ಮತ್ತು ವರದಿ ತಯಾರಿಕೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಆರ್. ಸುಕುಮಾರ್ ನೇತೃತ್ವದ ತಂತ್ರಜ್ಞರ ತಂಡ ನೆರವು ನೀಡಿತ್ತು ಎಂದು ತಿಳಿಸಿದರು.
ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ಇತ್ತೀಚೆಗೆ ಬಿಡುಗಡೆಯಾದ ಹುಲಿ ಗಣತಿ ವರದಿಯಿಂದ ಗೊತ್ತಾಗಿತ್ತು. ಈಗ ಆನೆಗಳ ಸಂಖ್ಯೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ ದೊರಕಿದೆ. 2010 ರಿಂದಲೂ ರಾಜ್ಯದಲ್ಲಿ ಆನೆಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ ಎಂದರು.ಸಂಘರ್ಷ ತಡೆಗೆ ಕ್ರಮ
ಆನೆಗಳು ಜನವಸತಿ ಪ್ರದೇಶ ಪ್ರವೇಶದಿಂದ ಮಾನವ– ಪ್ರಾಣಿ ಸಂಘರ್ಷ ಉಂಟಾಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿದೆ. ಅರಣ್ಯದ ಅಂಚಿನಲ್ಲಿ ರೈಲ್ವೆ ಹಳಿಯ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸಲು ಪ್ರಸಕ್ತ ವರ್ಷದ ಬಜೆಟ್ನಲ್ಲಿ ₹120 ಕೋಟಿ ಅನುದಾನ ಒದಗಿಸಲಾಗಿದೆ. ₹ 300 ಕೋಟಿ ಅನುದಾನದ ಬೇಡಿಕೆ ಇದ್ದು, ಹೆಚ್ಚಿನ ಮೊತ್ತದ ಮಂಜೂರಾತಿಗೆ ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಆನೆ ತಡೆಗೆ ರೈಲ್ವೆ ಕಂಬಿ ಬೇಲಿಯೂ ಸೇರಿದಂತೆ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರದ ನೆರವನ್ನು ಪಡೆಯುವುದಕ್ಕೂ ಪ್ರಯತ್ನಿಸಲಾಗುತ್ತಿದೆ. ಹುಲಿ ಯೋಜನೆಯ ಮೂರು ಮತ್ತು ನಾಲ್ಕನೇ ಕಂತುಗಳ ಅನುದಾನವೂ ಕೇಂದ್ರದಿಂದ ಬಿಡುಗಡೆಯಾಗಿಲ್ಲ. ಈ ಎಲ್ಲವನ್ನೂ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.