ನ್ಯೂಸ್ ನಾಟೌಟ್ :ಕಳೆದ ಕೆಲದಿನಗಳಿಂದ ಕಾಡಾನೆಯೊಂದು ಗಾಯಗೊಂಡು ನರಳಾಡುತ್ತಿದ್ದ ವೇಳೆ ಅದನ್ನು ಸೆರೆ ಹಿಡಿದು ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೇಳೆ ಅರಣ್ಯ ಸಿಬ್ಬಂದಿ ಮೇಲೆರಗಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರು ಸಮೀಪ ನಡೆದಿದೆ. ನಿಂತಿದ್ದ ಕಾಡಾನೆಗೆ ಅನಸ್ತೇಷಿಯಾ ಕೊಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿಯನ್ನು ಅಟ್ಟಾಡಿಸಿ ಸೊಂಡಿಲಿನಲ್ಲಿ ಎತ್ತಿ ಬಿಸಾಕಿದೆ.
ಈ ಘಟನೆಗೆ ಇಡೀ ಊರೇ ಭಾರಿ ಬೇಸರವನ್ನು ವ್ಯಕ್ತಪಡಿಸಿದೆ.ಭೀಮ ಎಂಬ ಹೆಸರಿನ ಕಾಡಾನೆಯು ಈವರೆಗೆ ಯಾರ ಮೇಲೂ ಯಾವುದೇ ತೊಂದರೆಯನ್ನು ಮಾಡಿದ ಉದಾಹರಣೆಗಳಿಲ್ಲ.ಭಾರಿ ಸೌಮ್ಯ ಸ್ವಭಾವದ ಈ ಕಾಡಾನೆಯು ಕಳೆದ ಕೆಲ ದಿನಗಳಿಂದ ಗಾಯಗೊಂಡಿತ್ತು ಎಂದು ತಿಳಿದು ಬಂದಿದೆ.
ಹೀಗಾಗಿ ಕಾಡಾನೆ ಭೀಮನಿಗೆ ಅರಿವಳಿಕೆ ಔಷಧ ನೀಡಲು ಹತ್ತಿರ ಹೋದ ಅರಣ್ಯ ಸಿಬ್ಬಂದಿ ವೆಂಕಟೇಶ್ ಅವರನ್ನು ಅಟ್ಟಾಡಿಸಿಕೊಂಡು ಹೋಗಿ, ಸೊಂಡಿಲಿನಿಂದ ಎತ್ತಿ ಎಸೆದಿದೆ ಎಂದು ತಿಳಿದು ಬಂದಿದೆ.ಅರಿವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜತೆ ವೆಂಕಟೇಶ್ ತೆರಳಿದ್ದರು.ಈ ವೇಳೆ ಈ ದುರಂತ ಸಂಭವಿಸಿದೆ .
ಕೂಡಲೇ ಗಂಭೀರ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ಅಲ್ಲಿದ್ದ ಸಿಬ್ಬಂದಿ ವರ್ಗ ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆಸ್ಪತ್ರೆಯಲ್ಲಿಯೂ ಸೂಕ್ತ ಚಿಕಿತ್ಸೆ ನೀಡಿ ಚಿಕಿತ್ಸೆ ಮುಂದುವರಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ವೆಂಕಟೇಶ್ ದುರಂತ ಅಂತ್ಯ ಕಂಡಿದ್ದಾರೆ.
ಕಾಡಾನೆ ಕಾರ್ಯಾಚರಣೆ ವೇಳೆ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ಪುತ್ರ ಮೋಹನ್ ಡಿಎಫ್ಓಗೆ ತರಾಟೆಗಿಳಿದರು. ಇಲಾಖೆಯಲ್ಲಿ ಶಿಸ್ತು ಕ್ರಮ ಇದ್ದಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ.ಯಾವುದೇ ಮುಂಜಾಗ್ರತಾ ಕ್ರಮವಹಿಸಿಲ್ಲ. 67 ವರ್ಷದ ನಮ್ಮ ತಂದೆಯನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದೀರಿ. ನಮ್ಮ ತಂದೆ ಬಿಟ್ರೆ ಮತ್ಯಾರಿಗೂ ಇಲ್ಲಿಯವರೆಗೆ ತರಬೇತಿ ನೀಡಿಲ್ಲಎಂದಾದರೆ ಇದು ನಿಮ್ಮ ಇಲಾಖೆಯ ನಿರ್ಲಕ್ಷ್ಯವೇ ಹೊರತು ಬೇರೆನೂ ಅಲ್ಲ.ಇದು ಅರಣ್ಯ ಇಲಾಖೆಗೆ ನಾಚಿಕೆಗೇಡು ಎಂದು ಆಕ್ರೋಶ ಹೊರಹಾಕಿದ್ದಾರೆ.