ನ್ಯೂಸ್ ನಾಟೌಟ್ : ಕಾಲ ಬದಲಾಗುತ್ತಿದೆ.ಮನುಷ್ಯನ ಜೀವನ ಶೈಲಿಯೂ ದಿನದಿಂದ ದಿನಕ್ಕೆ ವ್ಯತ್ಯಾಸವಾಗುತ್ತಿದೆ.ಈಗಿನ ಜನರೇಶನ್ ಪಾರ್ಟಿ, ಪಬ್ ಮೊದಲಾದ ಸಂಸ್ಕೃತಿಗೆ ಮರುಳಾಗುತ್ತಿದೆ. ಹೀಗಾಗಿಯೇ ಡ್ರಿಂಕ್ಸ್ ಮಾಡುವವರ ಸಂಖ್ಯೆ ಅಧಿಕವಾಗಿದೆ. ಕುಡುಕರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬಾರ್ವೊಂದಕ್ಕೆ ಬೀಗ ಜಡಿಯಲಾಗಿದೆ.
ಹೌದು, ದಾವಣಗೆರೆ ಜಿಲ್ಲೆ, ಹೊನ್ನಾಳಿ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದ್ಯದಂಗಡಿಯಿಂದಾಗಿ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ ಎಂದು ಗ್ರಾಮದ ಎಂಎಸ್ಐಎಲ್ ಗೆ ಬೀಗ ಜಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಮದ್ಯಕ್ಕಾಗಿ ಗ್ರಾಮದ ಹೆಚ್ಚಿನವರು ಮುಗಿಬೀಳುತ್ತಿದ್ದಾರೆ.ಮಾತ್ರವಲ್ಲ ಅಕ್ಕಪಕ್ಕದ ಗ್ರಾಮದ ಯುವಕರೂ ಇಲ್ಲಿಗೆ ಬರುತ್ತಿದ್ದು ಭಾರಿ ತೊಂದರೆ ಎದುರಿಸುವಂತಾಗಿದೆ. ಕುಡುಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಗ್ರಾಮದಲ್ಲಿ ಕಿರಿಕಿರಿ ಉಂಟಾಗುತ್ತಿದ್ದು,ಆ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಓಡಾಡೋದು ಕಷ್ಟವಾಗಿದೆ. ಕುಡುಕರ ಉಪಟಳದಿಂದಾಗಿ ಖಾಲಿ ಬಾಟಲ್ ಮತ್ತು ಪೌಚ್ ಗ್ರಾಮದ ದೇವಸ್ಥಾನ ಆವರಣ, ಹೊಲ-ಗದ್ದೆ, ಮನೆಗಳ ಮುಂದೆಯೂ ರಾಶಿ ಬಿದ್ದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕುಡಿತದ ಚಟದಿಂದಾಗಿ ಅನೇಕ ಮಹಿಳೆಯರು ಮಕ್ಕಳು ಬೀದಿಗೆ ಬಂದಿದ್ದಲ್ಲದೇ ಗಲಾಟೆಗಳಿಂದಾಗಿ ಆ ಗ್ರಾಮದಲ್ಲಿ ಬಾರಿ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿತದ ವಿಚಾರಕ್ಕೆ ನಿನ್ನೆಯೂ ಅಕ್ಕಪಕ್ಕದ ಗ್ರಾಮದ ಯುವಕರ ಜೊತೆ ಗಲಾಟೆಯಾಗಿದ್ದು, ಗ್ರಾಮಸ್ಥರು ರಾತ್ರೋರಾತ್ರಿ ಎಂಎಸ್ಐಎಲ್ಗೆ ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ. ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.