ನ್ಯೂಸ್ ನಾಟೌಟ್ :ಮಂಗಳೂರಿನ ನೆಹರೂ ಮೈದಾನದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಧ್ವಜಾರೋಹಣಗೈದು ಮಾತನಾಡಿದರು.
ಸ್ವಾತಂತ್ರ್ಯ ಮಹೋತ್ಸವದಲ್ಲಿ ಸಚಿವ ದಿನೇಶ ಗುಂಡುರಾವ್ ಭಾಷಣ ಮಾಡುತ್ತಾ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕುತ್ತಿದ್ದೇವೆ.ಈ ಹಿಂದೆ ಘೋಷಿಸಿದಂತೆ ಇದೀಗ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ ಎಂದರು.
ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ನಡೆಯುವ ದಬ್ಬಾಳಿಕೆ ,ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಹೊರಡಿಸುವ ಸೌಹಾರ್ದತೆ ಕೆಡಿಸುವ ವಿಚಿತ್ರ ಕಾರ್ಯ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಹಾಗೂ ಈ ಮೂಲಕ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸುವ ವಾತಾವರಣ ನಿರ್ಮಾಣವಾಗುತ್ತಿದೆ .ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿ ಕ್ರಮ ಕೈಗೊಳ್ಳಲಾಗಿದೆ. ಹಿಂಸಾತ್ಮಕ ರೀತಿಯಲ್ಲಿ ಕಾನೂನುಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗಿದೆ.ಕಾನೂನು ಪ್ರಕಾರವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.ಕಾನೂನು ಬಾಹಿರ ಚಟುವಟಿಕೆಗಳಿಗೆ ಕೈ ಹಾಕುವವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದವರು ಹೇಳಿದರು.
ದೇಶಪ್ರೇಮ ಯಾವುದೇ ಒಂದು ರಾಜಕೀಯ ಪಕ್ಷ ವ್ಯಕ್ತಿ ಸಂಘಟನೆಗೆ ನಿಮಿತ್ತವಲ್ಲ,ದೇಶವನ್ನು ಭದ್ರಗೊಳಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.ಅವರ ದೇಶ ಪ್ರೇಮ ಕಡಿಮೆ ಇವರ ದೇಶಪ್ರೇಮ ಹೆಚ್ಚು ಎನ್ನುವುದು ಜನರಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ.ಯಾವುದೇ ತತ್ವ ಸಿದ್ಧಾಂತ ಇನ್ನೊಂದು ಸಿದ್ಧಾಂತದಿಂದ ದೊಡ್ಡದಲ್ಲ. ನಾವು ಸರಿ ಅವರು ತಪ್ಪು ಎನ್ನುವ ಮಾತು ಕೇಳಿ ಬರುತ್ತಿರುವುದು ಖಂಡನೀಯವಾದುದು ಎಂದು ಹೇಳಿದರು.ನಮ್ಮ ಮೂಲಭೂತ ಹಕ್ಕು ಮತ್ತು ಸ್ವತಂತ್ರ ಅನೇಕ ಕಡೆ ಕೆಡಿಸುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.ಕಾನೂನು ಕೈಗೆತ್ತಿಕೊಳ್ಲುವ ಘಟನೆಗಳು ನಡೆಯುತ್ತಿವೆ. ಇಂತಹ ಘಟನೆಗಳು ನಡೆಯುತ್ತಿರುವುದು ವಿಷಾಧನೀಯ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಭಯ , ಭೀತಿಯ ವಾತಾವರಣ ಸೃಷ್ಟಿಯಾಗಲು ಬಿಡುವುದಿಲ್ಲ. ಯಾರಿಗೂ ಕಾನೂನನನ್ನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ.ಸುಳ್ಳು ಮಾಹಿತಿಗಳಿಂದ ಅಪಪ್ರಚಾರದಿಂದ ವಾತಾವರಣ ಕೆಡಿಸಬಾರದು ಎಂದ ಅವರು ಒಂದು ಕಡೆ ಕಾನೂನು ವ್ಯವಸ್ಥೆ ಕಾಪಾಡಬೇಕು ಇನ್ನೊಂದು ಕಡೆ ಜನರ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.
ಇನ್ನು ಡ್ರಗ್ಸ್ ಮುಕ್ತ ಮಂಗಳೂರು ಕುರಿತು ಮಾತನಾಡಿದ ಅವರು ಆಗಸ್ಟ್ 15 ರ ಒಳಗೆ ಡ್ರಗ್ಸ್ ಮುಕ್ತ ಮಂಗಳೂರು ಮಾಡಬೇಕೆಂದು ಗೃಹ ಸಚಿವರು ತಿಳಿಸಿದರು. ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸರಿಗೆ ಸ್ಪಷ್ಟ ಸೂಚನೆಯನ್ನು ನೀಡಲಾಗಿತ್ತು .ಮಂಗಳೂರು ಪೊಲೀಸರು ಈ ನಿಟ್ಟಿನಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದೆ.ಕೇಸ್ ಗಳನ್ನು ಹಾಕಲಾಗಿದೆ ಎಂದು ಸ್ಪಷ್ಟ ಪಡಿಸಿದರು.
ವಿದ್ಯಾರ್ಥಿ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸರು ಹಮ್ಮಿಕೊಂಡಿದ್ದಾರೆ ಇದು ಉತ್ತಮ ವಿಚಾರ. ಕಳೆದ ಎರಡು ತಿಂಗಳಲ್ಲಿ ಹಲವಾರು ಡ್ರಗ್ಸ್ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.ಡ್ರಗ್ಸ್ ಗೆ ಇರುವ ಸಪ್ಲೈ ಮತ್ತು ಡಿಮಾಂಡ್ ಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ.ಡ್ರಗ್ಸ್ ಹಾವಳಿಯಿಂದ ವಿದ್ಯಾರ್ಥಿಗಳು, ಜನರು ವಿಮುಕ್ತ ರಾಗಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎಂದು ಕರೆ ನೀಡಿದರು.