ನ್ಯೂಸ್ ನಾಟೌಟ್: ಧರ್ಮಸ್ಥಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಸಮರ ಸಾರುವುದಕ್ಕೆ ಇದೀಗ ಅಭಿಮಾನಿಗಳ ಸಂಘವೇ ಹುಟ್ಟಿಕೊಂಡಿದೆ.
‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಎಂಬ ಸಂಘಟನೆಯನ್ನು ರಚಿಸಿಕೊಳ್ಳಲಾಗಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಆರೋಪ ಮಾಡಿ, ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕಾರಣ ಈ ಸಂಘಟನೆ ರಚನೆಯಾಗಿದೆ.
‘ಧರ್ಮಸ್ಥಳ ಕ್ಷೇತ್ರವನ್ನು ಗುರಿಯಾಗಿಸಿ ನಡೆಸುತ್ತಿರುವ ಅಪಪ್ರಚಾರ ಜನರಲ್ಲಿ ಆಘಾತ ಮೂಡಿಸಿದ್ದು, ಸಂಘಟನೆಯ ನೇತೃತ್ವದಲ್ಲಿ ಆಗಸ್ಟ್ 4ರಂದು ಬೆಳಿಗ್ಗೆ 10 ಗಂಟೆಗೆ ಉಜಿರೆ ಜನಾರ್ದನ ಸ್ವಾಮಿ ರಥಬೀದಿಯಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ.
ಜತೆಗೆ, ಸುಳ್ಳು ಸುದ್ದಿಗಳ ವಿರುದ್ಧ ಜನತಾ ಚಳವಳಿ ನಡೆಸಲು ನಿರ್ಧರಿಸಲಾಗಿದೆ’ ಎಂದು ಸಂಘಟನೆಯ ಪರವಾಗಿ ಡಾ. ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.
‘ಈ ಸಂಘಟನೆಯ ಪ್ರಥಮ ಸಭೆ ಉಜಿರೆಯಲ್ಲಿ ನಡೆಯಿತು. 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಯುವತಿಯೊಬ್ಬರ ಹತ್ಯೆ ಪ್ರಕರಣದ ಕುರಿತು ಸಿಬಿಐ ಕೋರ್ಟ್ನಿಂದ ನೀಡಿರುವ ತೀರ್ಪು, ನಂತರದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಿತು. ಹತ್ಯೆಯಾದ ಬಾಲಕಿ ಮತ್ತು ಅವರ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಈ ಹತ್ಯೆ ಪ್ರಕರಣ ಮುಂದಿಟ್ಟುಕೊಂಡು, ನಂತರ ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಆಧಾರರಹಿತವಾಗಿ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕ್ರಮಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲು ನಿರ್ಧರಿಸಲಾಯಿತು’ ಎಂದು ಅವರು ಹೇಳಿದ್ದಾರೆ.