ನ್ಯೂಸ್ ನಾಟೌಟ್ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆ ಕೂಡ ಒಂದು.ಅನ್ನಭಾಗ್ಯ ಯೋಜನೆ (Anna Bhagya) ಅಡಿ ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ನೀಡಲು ಘೋಷಿಸಿತ್ತು. ಆದರೆ ಪಡಿತರ ಅಕ್ಕಿ (Rice) ವಿತರಣೆ ವಿಚಾರವಾಗಿ ಯುದ್ಧವೇ ನಡಿತಿದೆ.
ಐದು ಕೆಜಿ ಅಕ್ಕಿಯ ಜೊತೆಗೆ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿ ನೀಡಲು ನಿರ್ಧರಿಸಿತ್ತಾದರೂ ಕೊನೆಗೆ ಇದು ಸಾಧ್ಯವಾಗಿಲ್ಲ. ಇದರ ಬದಲಾಗಿ ಅಕ್ಕಿಯ ಬದಲಾಗಿ ಹಣ ನೀಡುತ್ತಿದೆ.ಹೀಗೆ ಅಕ್ಕಿ ಇಲ್ಲವೆಂದು ಪೇಚಾಡುವ ಸರ್ಕಾರಕ್ಕೆ ತನ್ನದೇ ಗೋದಾಮಿನಿಂದ ಅಕ್ಕಿ ಕಳವಾಗುತ್ತಿರುವುದರ ಸುದ್ದಿ ಆಘಾತಕಾರಿ ಎಂಬಂತಿದೆ.
ಇಂತಹ ಘಟನೆ ಬೆಳಕಿಗೆ ಬಂದಿರೋದು ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ. ಕೋಟ್ಯಂತರ ಮೌಲ್ಯದ ಪಡಿತರ ಅಕ್ಕಿ ನಾಪತ್ತೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಬರೊಬ್ಬರಿ 1.32 ಕೋಟಿ ಮೌಲ್ಯದ 3892 ಕ್ವಿಂಟಾಲ್ ಅಕ್ಕಿ ನಾಪತ್ತೆಯಾಗಿದ್ದು, ಫಿಸ್ಟ್ ತಂತ್ರಾಂಶದಲ್ಲಿ ದಾಸ್ತಾನು ಪರಿಶೀಲಿಸಿದಾಗ ಗೋಲ್ಮಾಲ್ ಪತ್ತೆಯಾಗಿದೆ.
ಈ ಕುರಿತಂತೆ ಪಡಿತರ ಅಕ್ಕಿ ಅವ್ಯವಹಾರದ ಬಗ್ಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಮಂಗಳೂರು ಕಚೇರಿ ವ್ಯವಸ್ಥಾಪಕ ಶರತ್ ಕುಮಾರ್ ಹೋಂಡಾ ಗೋದಾಮಿನ ನಿರ್ವಾಹಕ ವಿಜಯ್ ವಿರುದ್ಧ ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.