ನ್ಯೂಸ್ ನಾಟೌಟ್ : ಮದುವೆ ಅನ್ನೋದು ಏಳು ಜನುಮಗಳ ಅನುಬಂಧ.ಅಪರಿಚಿತರಾಗಿದ್ದ ಗಂಡು ಹೆಣ್ಣಿನ ಎರಡು ಮನೆತನಗಳು ಒಂದಾಗಿ ಸಂಬಂಧ ಬೆಳೆಸುವ ಒಂದು ಪ್ರಕ್ರಿಯೆ.ಗಂಡ ಹೆಂಡತಿಯಾಗಿ ಕಾಯಾ-ವಾಚಾ-ಮನಸಾ ಹೊಂದಾಣಿಕೆಯಿಂದ ಬಾಳುವ ಒಂದು ಸಾಮಾಜಿಕ ವ್ಯವಸ್ಥೆ.ಹೀಗೆ ತಾನು ಇಷ್ಟ ಪಟ್ಟು ಮದುವೆಯಾದವನ ವಿರುದ್ಧವೇ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ..!ಮಹಿಳಾ ಟೆಕ್ಕಿ ಅಸಮಾಧಾನಗೊಳ್ಳಲು ಕಾರಣವೇನು?
ಹೌದು ಆತ ಮದುವೆಯಾಗಿ ತಿಂಗಳುಗಳೇ ಕಳೆದಿವೆ. ಆದರೆ ಮದುವೆಯಾಗಿ ಅದೆಷ್ಟೋ ತಿಂಗಳಾಗಿದ್ದರೂ ದಿನವೂ ಒಂದೊಂದು ಕಾರಣ ನೀಡಿ ಲೈಂಗಿಕ ಸಂರ್ಪಕವನ್ನು (Sexual relationship)ಪತಿ ಮುಂದೂಡುತ್ತಿದ್ದ. ಇದೀಗ ಗಂಡನ ಅಸಲಿ ಮುಖವನ್ನು (Real Face of Husband) ಆಕೆ ಪತ್ತೆ ಹಚ್ಚಿ ಅಸಲಿ ಕಾರಣವನ್ನು ತಿಳಿದಿದ್ದಾಳೆ.
ಈಕೆಯ ಪ್ರಕಾರ ಅವನು ಸಲಿಂಗಕಾಮಿಯಾಗಿದ್ದು, ಹೆಣ್ಮಕ್ಕಳ ಬಗ್ಗೆ ಅವನಿಗೆ ಎಳ್ಳಷ್ಟೂ ಆಸಕ್ತಿ ಇಲ್ಲ ಎಂಬುದನ್ನು ಕಂಡು ಹಿಡಿದಿದ್ದಾಳೆ. ಕೇವಲ ಪುರುಷರು ಮಾತ್ರ ಆತನ ಆಕರ್ಷಣೆಯ ಕೇಂದ್ರಬಿಂದು. ಹೀಗಾಗಿ ಆಕೆ ಈಗ ತನ್ನ ಸಲಿಂಗಿ ಗಂಡನ ವಿರುದ್ದ ಜ್ಞಾನ ಭಾರತಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾಳೆ.
ತಾನೋರ್ವ ಸಲಿಂಗಿ ಎಂದು ತಿಳಿದಿದ್ರೂ ಮದುವೆಯಾಗಿದ್ದಾನೆ.ಮಹಿಳೆ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದು, ಪತಿಯ ಪೋಷಕರು ವಿಷಯವನ್ನು ಮುಚ್ಚಿಟ್ಟು ಮದುವೆ ಮಾಡಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ.ಮದುವೆ ವೇಳೆ ಪತಿ ಕುಟುಂಬಸ್ಥರು 160 ಗ್ರಾಂ ಚಿನ್ನ ಮತ್ತು ನಗದು ಪಡೆದುಕೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದು,ಮದುವೆಯಾದ ನಂತರ ಕಾರಣಗಳನ್ನು ಹೇಳುತ್ತಾ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ ಎಂದು ಹೇಳಿದ್ದಾರೆ. ಇನ್ನು ಪತಿ ಸೋದರನಿಗೆ ಮಕ್ಕಳು ಆಗಿರಲಿಲ್ಲ. ಹೀಗಾಗಿ ನೀವು ಮಕ್ಕಳು ಮಾಡಿಕೊಳ್ಳುವಂತೆ ಸಂಬಂಧಿಗಳು ಸಲಹೆ ನೀಡಿದ್ರೆ ಪತಿ ಓಡಿ ಹೋಗುತ್ತಿದ್ದ ಎಂದು ವರದಿಯಾಗಿದೆ.
ಬದುಕಿನಲ್ಲಿ ನೂರಾರು ಕನಸು ಕಂಡು ಮದುವೆಯಾಗಿದ್ದ ಮಹಿಳೆಗೆ ಪತಿ ವರ್ತನೆ ಕಂಡು ಬರಸಿಡಿಲು ಬಡಿದಂತಾಗಿದೆ.ಈಕೆ ಇಂಜಿನಿಯರ್ ಆಗಿದ್ದು,ಹುಡುಗನೂ ಒಳ್ಳೆಯ ಕೆಲಸದಲ್ಲಿದ್ದ. ಮದುವೆಗೂ ಮುನ್ನ ಆತನ ಪ್ರಬುದ್ಧ ಮತ್ತು ನಯವಾದ ವರ್ತನೆಗಳು ಆಕೆಗೂ ಇಷ್ಟವಾಗಿದ್ದು, ಮದುವೆಗೆ ಒಪ್ಪಿಕೊಂಡಿದ್ದು, ದಿನ ಕಳೆದಂತೆ ಆತ ಯಾಕೋ ಮದುವೆಯ ನಂತರ ನಡೆಯಬೇಕಾದ ಯಾವ ಚಟುವಟಿಕೆಗಳಿಗೂ ಆಸಕ್ತಿ ತೋರಿಸುತ್ತಿಲ್ಲವೆಂದು ಆಕೆಯ ಅರಿವಿಗೆ ಬಂದಿದೆ. ಮೊದಲ ರಾತ್ರಿಯಾಯ್ತು,ಎರಡನೇ ರಾತ್ರಿಯೂ ಆಯ್ತು, ಹೀಗೆ ನೂರಾರು ರಾತ್ರಿಗಳು ಕಳೆದರೂ ಫಸ್ಟ್ ನೈಟ್ ನಡೆಯಲೇ ಇಲ್ಲ.
ಪತ್ನಿಯಿಂದ ದಿನಕ್ಕೊಂದು ನೆಪವೊಡ್ಡಿ ದೂರವಿರುತ್ತಿದ್ದ.ರಾತ್ರಿ ಆಕೆಯಿಂದ ದೂರ ಉಳಿಯಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಇದನ್ನು ಕುಟುಂಬಿಕರಲ್ಲಿ ಗುಟ್ಟಾಗಿ ಪ್ರಸ್ತಾಪಿಸಿದಾಗ ಅದಕ್ಕೆ ಅವಸರ ಮಾಡಬೇಡ, ಅವನ ಅಣ್ಣನಿಗೆ ಮಕ್ಕಳಾಗಿಲ್ಲ. ಅವನಿಗೆ ಆಗಲಿ, ನಿಮಗೆ ನಂತರ ಆದರೆ ಸಾಕು ಎಂದಿದ್ದರು ಎನ್ನಲಾಗಿದೆ.
ಆದರೆ ಮಕ್ಕಳು ಆಗುವುದಕ್ಕಿಂತಲೂ ಮುನ್ನ ಮದುವೆಯಾದ ಬಳಿಕ ಗಂಡು-ಹೆಣ್ಣಿನ ನಡುವೆ ನಡೆಯುವ ಸಹಜ ಚಟುವಟಿಕೆಗಳೂ ನಡೆಯುತ್ತಿಲ್ಲವಲ್ಲ, ಹಾಗಿದ್ದರೆ ಈತನಿಗೆ ಮದುವೆ ಆಗುವ ಉಸಾಬರಿ ಯಾಕೆ ಬೇಕಿತ್ತು ಅನ್ನುವ ಚಿಂತೆ ಆಕೆಯದ್ದಾಗಿತ್ತು. ಮಕ್ಕಳ ಬಗ್ಗೆ ಮಾತನಾಡಿದಾಗಲಂತು ಪಲಾಯನ ಮಾಡುತ್ತಿದ್ದು, ಏನೇನೋ ನೆಪವೊಡ್ಡಿ ಎಸ್ಕೇಪ್ ಆಗುತ್ತಿದ್ದ ಎಂದು ದೂರಲಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ಪತ್ನಿ ಒಂದು ದಿನ ಅವನ ಮೊಬೈಲನ್ನು ಪರೀಕ್ಷಿಸಿದಳು. ಆಗ ಅವಳಿಗೆ ಬೆಚ್ಚಿ ಬೀಳುವ ಸಂಗತಿಯೊಂದು ತಿಳಿದುಬಂದಿದೆ.ಆತನ ಮೊಬೈಲ್ ಜಾಲಾಡಿದಾಗ ಅವನಿಗೆ ಹುಡುಗಿಯರ ಮೇಲೆ ಆಸಕ್ತಿಯೇ ಇಲ್ಲ ಅನ್ನೊದಕ್ಕೆ ಉತ್ತರ ಸಿಕ್ಕಿದೆ. ಆತನ ಆಸಕ್ತಿ ಏನಿದ್ದರೂ ಹುಡುಗರು. ಅವನೊಬ್ಬ ಪುರುಷ ಸಲಿಂಗಿ ಅನ್ನೋದನ್ನು ಮನದಟ್ಟು ಮಾಡಿಕೊಂಡಳು.
ಮೊಬೈಲ್ ವಾಟ್ಸ್ ಆಪ್, ಮೆಸೇಂಜರ್ಗಳನ್ನು ನೋಡಿದಾಗ ಆತ ಬೇರೆ ಬೇರೆ ಹುಡುಗರ ಜತೆ ನಡೆಸಿದ ಸೆಕ್ಸ್ ಚಾಟ್ಗಳು ಕಂಡುಬಂದವು. ಜತೆಗೆ ವಾಟ್ಸ್ ಆಪ್ನಲ್ಲಿ ಆತ ಗಂಡ-ಹೆಂಡತಿ ಆಲಿಂಗಿಸಿಕೊಳ್ಳುವಂತೆ ಬೇರೆ ಹುಡುಗನನ್ನು ಆಲಿಂಗಿಸಿಕೊಂಡಿದ್ದು ಕಂಡುಬಂದಿದೆ. ಮಾತ್ರವಲ್ಲ ಲೈಂಗಿಕ ಚಟುವಟಿಕೆ ನಡೆಸುವ ಚಿತ್ರಗಳು, ವಿಡಿಯೋಗಳೂ ಕೂಡ ಇದ್ದವು ಎಂಬ ಆರೋಪಗಳಿವೆ.
ಇದನ್ನೆಲ್ಲ ಗಮನಿಸಿ ಪ್ರಶ್ನಿಸಿದಾಗ ಕೆರಳಿದ ಆತ ಆಕೆ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ. ಇದಾದ ಬಳಿಕ ಯುವತಿ ಮತ್ತೊಮ್ಮೆ ತನ್ನ ಮನೆಯವರಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾಳೆ. ಆಗಲೂ ಅವರು ಹೊಂದಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಅದೆಷ್ಟೋ ಗಂಡು ಮಕ್ಕಳಿಗೆ ಕೆಟ್ಟ ಹೆಂಗಸರ ಸಂಗ ಇರುತ್ತದೆ. ಆದರೆ, ಇವನು ಹಾಗಲ್ಲವಲ್ಲ ಎಂದು ಹೇಳುವ ಮೂಲಕ ಆಕೆಯನ್ನೇ ಸಮಾಧಾನ ಮಾಡಿದ್ದರು.
ಇದೆಲ್ಲದರ ನಡುವೆ ಆಕೆಗೆ ಈ ವ್ಯಕ್ತಿ ಸಲಿಂಗಿ ಎನ್ನುವುದು ಗೊತ್ತಿದ್ದೇ ಗಂಡನ ಮನೆಯವರು ಮದುವೆ ಮಾಡಿದ್ದಾರೆ ಎನ್ನುವ ಸತ್ಯ ತಿಳಿದು ಇನ್ನಷ್ಟು ಕುಪಿತಳಾಗಿದ್ದಾಳೆ.ಮನೆಯವರು ಮದುವೆಯಾದ ಬಳಿಕ ಸರಿ ಹೋಗಬಹುದು ಎಂದು ತಿಳಿದಿದ್ದರೂ ಇದು ಸರಿಯಾಗುವ ಲಕ್ಷಣವಂತು ಕಾಣಲಿಲ್ಲ. 160 ಗ್ರಾಂ ಚಿನ್ನ ಮತ್ತು ನಗದನ್ನು ನೀಡಿ ಮದುವೆಯಾಗಿದ್ದಲ್ಲದೇ ಈತನ ಈ ವರ್ತನೆಯನ್ನೂ ಸಹಿಸಿಕೊಳ್ಳಬೇಕಾ ಎಂದು ಇದೀಗ ಯುವತಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದಾರೆ. ಗಂಡ ಮತ್ತು ಮನೆಯವರ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.