ನ್ಯೂಸ್ ನಾಟೌಟ್: ಧರ್ಮಸ್ಥಳದ ಪಾಂಗಾಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ನಡೆದು 11 ವರ್ಷ ಕಳೆದರೂ ಕೃತ್ಯವೆಸಗಿದ ಹಂತಕರನ್ನು ಪತ್ತೆಹಚ್ಚಿ ಶಿಕ್ಷಿಸಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಆದ್ದರಿಂದ ಈ ಪ್ರಕರಣವನ್ನು ಮರು ತನಿಖೆ ನಡೆಸಿ ಇದರ ಹಿಂದಿರುವ ಹಂತಕರನ್ನು ಪತ್ತೆ ಹಚ್ಚಿ ಅವರನ್ನು ಶಿಕ್ಷಗೊಳಪಡಿಸಬೇಕೆಂದು ಎಂದು ಒತ್ತಾಯಗಳು ವ್ಯಕ್ತವಾಗುತ್ತಿವೆ. ಈ ಕುರಿತಂತೆ ಇಂದು ಸುಳ್ಯದ ಎಪಿಎಂಸಿ ಸಭಾಮಂಟಪದಲ್ಲಿ ಕ.ರಾ. ರೈತ ಸಂಘ ಸುಳ್ಯ ಘಟಕ ಮತ್ತು ಸಮಾನ ಮನಸ್ಕರು ಸೇರಿ ಸಮಾಲೋಚನ ಸಭೆಯನ್ನು ಹಮ್ಮಿಕೊಂಡರು.
ಕಳೆದ ಹನ್ನೊಂದು ವರ್ಷಗಳ ಹಿಂದೆ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಸುಳ್ಯದಲ್ಲಿ ಬೃಹತ್ ವಾಹನ ಜಾಥಾ ಹಾಗೂ ಕಾಲ್ನಡಿಗೆ ಜಾಥಾ ಅಗಸ್ಟ್ ೮ರಂದು ನಡೆಯಲಿದೆ. ಈ ಜಾಥಾದಲ್ಲಿ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ಜಾಥಾದಲ್ಲಿ ಜಾತಿ,ಧರ್ಮ ಭೇಧವಿಲ್ಲದೇ ಎಲ್ಲರೂ ಪಾಲ್ಗೊಂಡು ಮೃತ ಸೌಜನ್ಯಳಿಗೆ ನ್ಯಾಯ ಒದಗಿಸಿಕೊಡುವ ಕೆಲಸವಾಗಬೇಕಾಗಿದೆ. ಈ ಉದ್ದೇಶದಿಂದ ಇಂದು(ಅಗಸ್ಟ್ ೦3) ಸಮಾಲೋಚನ ಸಭೆಯನ್ನು ನಡೆಸಲಾಯಿತು.
ಸೌಜನ್ಯಳೆಂಬ ಮುಗ್ಧ ಬಾಲೆ ನಮ್ಮ ಮನೆ ಮಗಳು.ಭೀಕರ ಅತ್ಯಾಚಾರ ಮತ್ತು ಬರ್ಬರ ಹತ್ಯೆ ನಡೆದು 11 ವರ್ಷ ಕಳೆದರು ಇನ್ನೂ ಆಕೆಗೆ ನ್ಯಾ ಯ ಸಿಕ್ಕಿಲ್ಲ.ಈ ದುರ್ಘಟನೆಗೆ ಕಾರಣರಾದವರು ಯಾರೆಂಬುದು ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐಯಿಂದಲೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂದರೆ ಇದರ ಹಿಂದಿರುವ ಕರಾಳ ಶಕ್ತಿಗಳು ಬಲಾಢ್ಯವಾಗಿರಲೇಬೇಕು. ಸಂತೋಷ ರಾವ್ ಎಂಬ ಅಮಾಯಕನನ್ನು ಆರೋಪಿಯನ್ನಾಗಿಸಿ ಕಾನೂನಿನ ಉರುಳಿನಿಂದ ತಪ್ಪಿಸಿಕೊಂಡಿರುವ ನರ ರಾಕ್ಷಸರನ್ನು ಹಿಡಿದು ಶಿಕ್ಷೆಗೆ ಗುರಿ ಪಡಿಸದಿದ್ದಲ್ಲಿ ನಾಗರಿಕ ಸಮಾಜ ತಲೆಯೆತ್ತಿ ನಡೆಯಲು ಸಾಧ್ಯವಿದೆಯೇ ಎನ್ನುವ ಆತಂಕ ಮೂಡಿದೆ.
ಜಾಗೃತ ಸಮಾಜ ಮಾತ್ರ ಇಂತಹ ಅನ್ಯಾಯಗಳನ್ನು ಎದುರಿಸಿ ಸತ್ಯವನ್ನು ಬಯಲಿಗೆಳೆಯಲು ಸಾಧ್ಯ ವಿದೆ.ಇಂತಹ ಸಮಾಜಮುಖಿ ಹೋರಾಟಕ್ಕೆ ಇಡೀ ಸಮಾಜವೇ ಎದ್ದು ನಿಂತು ಬೆಂಬಲಿಸಬೇಕಾಗಿದೆ .ಮೃತ ಮುಗ್ಧ ಮಗುವಿನ ಆತ್ಮಕ್ಕೆ ಶಾಂತಿಯನ್ನೂ ಹೆತ್ತವರಿಗೆ ಕುಟುಂಬಸ್ಥರಿಗೆ ನ್ಯಾಯವನ್ನೂ ಕೊಡಿಸಬೇಕಾಗಿದೆ. ಸೂಕ್ತ ತನಿಕಾ ಏಜೆನ್ಸಿಯಿಂದ ನಿಜ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಲು ಸರಕಾರದ ಮೇಲೆ ಒತ್ತಡ ಹೇರಲು ಜಾತಿ ಮತ ಪಂಥ ಮರೆತು ಒಗ್ಗೂಡಬೇಕಾಗಿದೆ ಎಂದು ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಸಭೆಯಲ್ಲಿ ಲೋಲಾಜಾಕ್ಷ ಬೂತ ಕಲ್ಲು (ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕ) ಮಾಧವ ಗೌಡ ಸುಳ್ಯ ಕೋಡಿ(ಉಪಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕ),ನೂಜಾಲು ಪದ್ಮನಾಭ ಗೌಡ(ಗೌರವ ಅಧ್ಯಕ್ಷರು ),ಸುಕುಮಾರ್ ಕೊಡ್ತುಗುಳಿ (ವಕೀಲರು ಸುಳ್ಯ),ದಿವಾಕರ್ ಪೈ ಆರಂಬೂರು ಮಜಿಗುಂಡಿ (ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕ),ಭರತ್ ಕುಮಾರ್ (ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕ),ರಾಮ ಕೃಷ್ಣ ಆರಂತೋಡು (ಅಂಬೇಡ್ಕರ್ ರಕ್ಷಣಾ ವೇದಿಕೆ ಆರಂತೋಡು),ಚಂದ್ರಶೇಖರ್ ಮರ್ಕoಜ (ಅಂಬೇಡ್ಕರ್ ರಕ್ಷಣಾ ವೇದಿಕೆ ),ಮಂಜುನಾಥ್ ಐವರ್ನಾಡು,ಸಾಬಸ್ಟಿನ್ ಮಾಡಪ್ಪಡಿ (ರೈತ ಸಂಘ ಸಂಚಾಲಕರು ಸುಳ್ಯ),ವಸಂತ್ ಪೆಳ್ತಡ್ಕ, ಕೆ ಪಿ ಜೋನಿ (ಕಾರ್ಮಿಕ ನಾಯಕರು), ರೋಹನ್ ಪೀಠರ್, ಉಬರಡ್ಕ, ತೀರ್ಥ ರಾಮ್ ಉಳುವಾರು,ಚಂದ್ರಶೇಖರ ಕೊಲ್ಚಾರ್ ಉಪಸ್ಥಿತರಿದ್ದರು.