ನ್ಯೂಸ್ ನಾಟೌಟ್: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅನ್ನು ದುರುಪಯೋಗಪಡಿಸಿಕೊಂಡು ಕೆಲ ಮಹಿಳೆಯರು “ಕಾನೂನಾತ್ಮಕ ಉಗ್ರವಾದ” ನಡೆಸುತ್ತಿದ್ದಾರೆ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ.
ಸಮಾಜದಲ್ಲಿ ವರದಕ್ಷಿಣೆಯ ಪಿಡುಗನ್ನು ನಿರ್ಮೂಲನೆಗೆ ಹಾಗೂ ಮಹಿಳೆಯೊಬ್ಬಳನ್ನು ಆಕೆಯ ಪತಿ ಮತ್ತು ಆತನ ಕುಟುಂಬ ವರದಕ್ಷಿಣೆ ಕುರಿತು ನಡೆಸಬಹುದಾದ ದೌರ್ಜನ್ಯದಿಂದ ರಕ್ಷಿಸುವ ಉದ್ದೇಶವನ್ನು ಈ ಕಾಯಿದೆ ಹೊಂದಿದೆ ಆದರೆ ಅದರ ದುರುಪಯೋಗವಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ
ಪತ್ನಿಯಿಂದ ದೂರವಾದ ಪತಿ ತನ್ನ ಹಾಗೂ ತನ್ನ ಕುಟುಂಬದ ವಿರುದ್ಧ ದಾಖಲಾದ ಕ್ರಿಮಿನಲ್ ಪ್ರಕರಣಗಳನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನ ಮಾತುಗಳನ್ನು ಹೇಳಿದೆ.
“ಸೆಕ್ಷನ್ 498ಎ ನಿಬಂಧನೆಯನ್ನು ಸಮಾಜದಿಂದ ವರದಕ್ಷಿಣೆ ಪಿಡುಗನ್ನು ಹೊಡೆದೋಡಿಸಲು ಜಾರಿಗೊಳಿಸಲಾಗಿದೆ. ಆದರೆ ಹಲವು ಪ್ರಕರಣಗಳಲ್ಲಿ ಈ ನಿಬಂಧನೆಯನ್ನು ದುರುಪಯೋಗಪಡಿಸಿ ಕಾನೂನಾತ್ಮಕ ಉಗ್ರವಾದವನ್ನು ನಡೆಸಲಾಗುತ್ತಿದೆ. ಈ ಸೆಕ್ಷನ್ನಡಿ ಉಲ್ಲೇಖಿಸಲಾಗಿರುವ ಕಿರುಕುಳ ಮತ್ತು ಹಿಂಸೆ ಕುರಿತಾದ ಆರೋಪಗಳನ್ನು ದೂರುದಾರೆಯೊಬ್ಬಳೇ ಸಾಬೀತುಪಡಿಸಲು ಸಾಧ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.
ಈ ನಿರ್ದಿಷ್ಟ ಪ್ರಕರಣದಲ್ಲಿ ವೈದ್ಯಕೀಯ ಪುರಾವೆ ಮತ್ತು ಸಾಕ್ಷಿಯ ಹೇಳಿಕೆಗಳು ಅರ್ಜಿದಾರ ಮತ್ತಾತನ ಕುಟುಂಬ ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಜಸ್ಟಿಸ್ ಸುಭೇಂದು ಸಮಂತ ಅವರ ಏಕಸದಸ್ಯ ಪೀಠ ಹೇಳಿತಲ್ಲದೆ ಮಹಿಳೆಯ ದೂರನ್ನು ಆಧರಿಸಿ ಕೆಳಗಿನ ಹಂತದ ನ್ಯಾಯಾಲಯದ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ದೂರುದಾರೆ ತನ್ನ ಪತಿಯ ಮೇಲೆ ಮಾಡಿದ ನೇರ ಆರೋಪ ಆಕೆಯ ಹೇಳಿಕೆ ಮಾತ್ರ ಆಗದೆ, ಅದಕ್ಕೆ ಯಾವುದೇ ದಾಖಲಿತ ಅಥವಾ ವೈದ್ಯಕೀಯ ಪುರಾವೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಈ ಪ್ರಕರಣದ ದಂಪತಿ ಮೊದಲಿನಿಂದಲೂ ಅವರ ಕುಟುಂಬದಿಂದ ಪ್ರತ್ಯೇಕವಾಗಿ ವಾಸವಾಗಿದ್ದರು. ಮದುವೆಯಾದ ನಂತರ ಮಹಿಳೆಯ ಅತ್ತೆ ಮಾವನೊಂದಿಗೆ ವಾಸಿಸಲು ಒಪ್ಪದೇ ಇದ್ದ ಕಾರಣ ಮೊದಲಿನಿಂದಲೂ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೆಂಬ ಅಂಶವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಇದನ್ನು ವರದಕ್ಷಿಣೆ ಕಿರುಕುಳ ಎಂದು ಬಿಂಬಿಸಿ ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿ ಕಿರುಕುಳ ನೀಡುವುದು ತಪ್ಪು ಎಂದು ಕೋರ್ಟ್ ತಿಳಿಸಿದೆ.