ನ್ಯೂಸ್ ನಾಟೌಟ್: ಚರಂಡಿ ಕಾಮಗಾರಿ ನಡೆಸುವಾಗ ಮನೆಯ ಕಾಂಪೌಂಡ್ ಕುಸಿದು ಓರ್ವ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಸಮೀಪದ ಕೃಷ್ಣಾಪುರದ ಕೆಇಬಿ ಬಳಿ ಸಂಭವಿಸಿದೆ.
ಮೃತ ಕಾರ್ಮಿಕನನ್ನು ಬಜ್ಪೆ ಕರಂಬಾರು ನಿವಾಸಿ ಹನೀಫ್ (51) ಎಂದು ಗುರುತಿಸಲಾಗಿದೆ. ಇನ್ನೋರ್ವ ಕಾರ್ಮಿಕ ಮಣಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು ಹೊರ ವಲಯದ ಸುರತ್ಕಲ್ ಸಮೀಪದ ಕೃಷ್ಣಾಪುರದ ಕೆಇಬಿ ಬಳಿ ಚರಂಡಿ ನಿರ್ಮಾಣದ ಕಾಮಗಾರಿ ನಡೆಯುತ್ತಿತ್ತು. ಈ ಸಂದರ್ಭ ಚರಂಡಿಗಾಗಿ ಅಡಿಪಾಯ ತೆಗೆಯಲಾಗಿತ್ತು. ಈ ಸಂದರ್ಭ ಚರಂಡಿಗೆ ತಾಗಿಯೇ ಪಕ್ಕದ ಮನೆಯ ಆವರಣಗೋಡೆಯಿತ್ತು. ಕಾರ್ಮಿಕರು ಕೆಲಸ ಮಾಡುತ್ತಿರುವಾಗಲೇ ಮನೆಯ ಆವರಣ ಗೋಡೆ ಕುಸಿದು ಕಾರ್ಮಿಕರ ಮೇಲೆ ಬಿದ್ದಿದೆ.
ಶರೀಫ್ ಎಂಬವರು ಚರಂಡಿಯ ಗುತ್ತಿಗೆ ಕಾಮಗಾರಿ ನಡೆಸುತ್ತಿದ್ದರು. ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಆವರಣಗೋಡೆ ಕುಸಿದು ಬೀಳುವ ದೃಶ್ಯ ಪಕ್ಕದ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.