ನ್ಯೂಸ್ ನಾಟೌಟ್: ಮೂಡಿಗೆರೆ ತಾಲೂಕಿನ ಚಾರ್ಮಾಡಿ ರಸ್ತೆ ಬದಿ ಪ್ರವಾಸಿಗರ ಮೋಜು-ಮಸ್ತಿ ಮತ್ತೆ ಮುಂದುವರಿದಿದೆ. ಅಪಾಯದ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಂದಾಗುತ್ತಿರುವ ದೃಶ್ಯ ಇದೀಗ ಕಂಡು ಬರುತ್ತಿದೆ. ಪ್ರಕೃತಿ ಸವಿ ಅನುಭವಿಸುವ ನೆಪದಲ್ಲಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.
ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಕಟವಾದ ಬಳಿಕ ಬೀಟ್ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಅಲ್ಲದೇ ಹಲವೆಡೆ ಎಚ್ಚರಿಕೆಯ ನಾಮಫಲಕ ಅಳವಡಿಸಲಾಗಿತ್ತು. ಇದೀಗ ಬೀಟ್ ಪೊಲೀಸರ ಕಣ್ಣು ತಪ್ಪಿಸಿ ಪ್ರವಾಸಿಗರಿಂದ ಪುಂಡಾಟ ಮತ್ತೆ ಮುಂದುವರಿದಿದೆ.
ಬೆಟ್ಟದ ಮೇಲಿನಿಂದ ಹರಿದು ಬರುತ್ತಿರುವ ನೀರಿನೊಂದಿಗೆ ಆಟವಾಡುತ್ತಾ ಬಂಡೆಗಳ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ಕಂಡುಬರುತ್ತಿದೆ. ಅಲ್ಲದೇ ಪ್ರವಾಸಿಗರು ಸಿಕ್ಕ ಸಿಕ್ಕಲ್ಲಿ ರಸ್ತೆ ಮಧ್ಯೆ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ವಾಹನ ಸಂಚಾರಕ್ಕೂ ಅಡ್ಡಿಪಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪೊಲೀಸರ ಗಸ್ತು ಕಡಿಮೆಯಾಗುತ್ತಿದ್ದಂತೆ ಪ್ರವಾಸಿಗರ ಪುಂಡಾಟ ಮತ್ತೆ ಹೆಚ್ಚುತ್ತಿದೆ. ಇತ್ತೀಚೆಗೆ ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋಗಿ ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತದಲ್ಲಿ ಯುವಕನೋರ್ವ ನೀರುಪಾಲಾಗಿದ್ದನ್ನು ಸ್ಮರಿಸಬಹುದು. ಆದರೂ ಅಪಾಯಕಾರಿ ಸ್ಥಳದಲ್ಲಿ ಯುವಕರ ಹುಚ್ಚಾಟ ಮಾತ್ರ ನಿಂತಿಲ್ಲ.