ಭಯೋತ್ಪಾದಕರು ತಲುಪದಂತೆ ನೋಡಿಕೊಳ್ಳಿ ಎಂದದ್ದೇಕೆ ಚಕ್ರಪಾಣಿ ಮಹಾರಾಜ್?
ನ್ಯೂಸ್ ನಾಟೌಟ್: ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಜಾಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶಿವಶಕ್ತಿ ಎಂದು ಹೆಸರಿಟ್ಟಿದ್ದರು. ಅಲ್ಲದೇ ಚಂದ್ರಯಾನ-2 ಪತನಗೊಂಡ ಜಾಗಕ್ಕೆ ತಿರಂಗ ಎಂದು ಹೆಸರಿಟ್ಟಿದ್ದರು. ಇದಾದ ಬಳಿಕ ಕಾಂಗ್ರೆಸ್ ನಾಯಕ ರಶಿದ್ ಅಲ್ವಿ ಮೋದಿ ಹೆಸರಿಟ್ಟಿರುವುದನ್ನು ವ್ಯಂಗ್ಯ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕ ಶೆಹಜಾದ್ ಪೂನವಾಲ ತಿರುಗೇಟು ನೀಡಿ ಕಾಂಗ್ರೆಸ್ ಹಿಂದೂ ವಿರೋಧಿ ತನವನ್ನು ಪ್ರದರ್ಶಿಸುತ್ತಿದೆ ಎಂದಿದ್ದರು. ಇದಾದ ಬಳಿಕ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು ಈ ಹೆಸರಿನ ಬಗ್ಗೆ ವಿವಾದದ ಅಗತ್ಯವಿಲ್ಲ. ಹೊರಗಿನ ಹುಡುಕಾಟಕ್ಕೆ ವಿಜ್ಞಾನ ಹಾಗೂ ಅಂತರಂಗದ ಹುಡುಕಾಟಕ್ಕೆ ಆಧ್ಯಾತ್ಮದ ಅಗತ್ಯವಿದೆ ಎಂದಿದ್ದರು.
ಚಂದ್ರನನ್ನು (Moon) ಹಿಂದೂ ರಾಷ್ಟ್ರವೆಂದು ಘೋಷಿಸಿ, ಭಯೋತ್ಪಾದಕರು ಅಲ್ಲಿಗೆ ತಲುಪದಂತೆ ನೋಡಿಕೊಳ್ಳಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾದ (Hindu Mahasabha) ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್ (Swami Chakrapani Maharaj) ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ಚಂದ್ರನನ್ನು ಹಿಂದೂ ಸನಾತನ ರಾಷ್ಟ್ರ ಎಂದು ಸಂಸತ್ತಿನಲ್ಲಿ ಘೋಷಿಸಬೇಕು. ಚಂದ್ರಯಾನ-3 (Chandrayaan-3) ಇಳಿದಿರುವ ಶಿವಶಕ್ತಿ ಪಾಯಿಂಟ್ನ್ನು ಅದರ ರಾಜಧಾನಿಯಾಗಿ ಅಭಿವೃದ್ಧಿಪಡಿಸಬೇಕು. ಆದ್ದರಿಂದ ಯಾವುದೇ ಭಯೋತ್ಪಾದಕ ಜಿಹಾದಿ ಮನಸ್ಥಿತಿಗಳು ಅಲ್ಲಿಗೆ ತಲುಪಬಾರದು ಎಂದಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ದೇಶದ ಅಭಿವೃದ್ಧಿ ಮತ್ತು ಇಸ್ರೋದ ಸಾಧನೆಯ ಬಗ್ಗೆ ಸುದ್ದಿಯಾಗುದರ ಜೊತೆಗೆ ಆ ಸಾಧನೆಯ ಹಾದಿಯಲ್ಲಿ ಬರುತ್ತಿರುವ ಟೀಕೆಗಳು ಮತ್ತು ಕೋಮು ವಿಚಾರಕ್ಕೆ ಸಂಬಂಧಿಸಿದ ವಿವಾದಗಳೂ ಸುದ್ದಿಯಾಗುತ್ತಿರುವುದು ವಿಚಿತ್ರ. ಸರ್ವಜನಾಂಗದ ಶಾಂತಿಯ ತೋಟವೆಂಬ ಭಾರತದಲ್ಲಿ ದೇಶ ಮತ್ತು ಸಾಧನೆಯೆಂದು ಬಂದಾಗ ಜಾತಿ, ಜನಾಂಗ ಮತ್ತು ಮತಗಳ ಸಂಕುಚಿತ ಭಾವನೆಗಳನ್ನು ಮರೆತು ಭಾರತೀಯರಾಗಿ ಯೋಚಿಸುವ ಅಗತ್ಯವಿದೆ ಏನಂತೀರಿ?