ನ್ಯೂಸ್ ನಾಟೌಟ್ : ಇಂದು ಸಂಜೆ ವೇಳೆಗಾಗಲೇ (ಆ 23) ಆ 20 ನಿಮಿಷಗಳು ಬಹುಶಃ ಪ್ರತಿಯೊಬ್ಬರ ಎದೆಬಡಿತ ಜೋರಾಗಿರುತ್ತದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿರುವ ಜನರು ಒಂದೆಡೆಯಾದರೆ, 140 ಕೋಟಿ ಜನಸಂಖ್ಯೆಯ ನಿರೀಕ್ಷೆಯ ಭಾರವನ್ನು ಹೊತ್ತ ಇಸ್ರೋ ವಿಜ್ಞಾನಿಗಳ ಮೇಲೆ ಇರುವ ಅಸಾಧಾರಣ ಒತ್ತಡ ಇನ್ನೊಂದೆಡೆ.
ನೆರೆ ರಾಜ್ಯ ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಎರಡು ಗ್ರಾಮಕ್ಕೂ ಚಂದ್ರಯಾನ-3 ಯೋಜನೆಗೂ ಒಂದು ಸಂಬಂಧವಿದೆ. ವಿಕ್ರಮ್ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ನ ಅಭ್ಯಾಸಕ್ಕಾಗಿ ಇಸ್ರೋ ನಮಕ್ಕಲ್ನ ಎರಡು ಗ್ರಾಮದ ಮಣ್ಣನ್ನು ಬಳಸಿಕೊಂಡು, ಚಂದ್ರನ ವಾತಾವರಣವನ್ನು ನಿರ್ಮಾಣ ಮಾಡಿತ್ತು. ಇದೇ ಗ್ರಾಮದ ಮಣ್ಣಿನಿಂದ ಚಂದ್ರನ ವಾತಾವರಣ ನಿರ್ಮಾಣ ಮಾಡುವುದರ ಹಿಂದೆ ದೊಡ್ಡ ಕಥೆಯಿದೆ.
ಹೌದು,ತಮಿಳುನಾಡಿನ ಮಣ್ಣು ಕೂಡಾ ಚಂದ್ರಯಾನ-3 ಮಿಷನ್ಗೆ ದೊಡ್ಡ ಕೊಡುಗೆ ನೀಡಿದೆ. 2019ರ ಜುಲೈ 22 ರಂದು ಭಾರತ ತನ್ನ ಚಂದ್ರಯಾನ-2 ಪ್ರಾಜೆಕ್ಟ್ಅನ್ನು ನಭಕ್ಕೆ ಹಾರಿಸಿತ್ತು. ಆಗಲೂ ಕೂಡ ಚಂದ್ರನ ದಕ್ಷಿಣ ಧ್ರುವ ಮುಟ್ಟುವುದು ಭಾರತದ ದೊಡ್ಡ ಗುರಿಯಾಗಿತ್ತು.ಅದೇ ವರ್ಷದ ಸೆಪ್ಟೆಂಬರ್ 6 ರಂದು ಆರ್ಬಿಟರ್ ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿತ್ತು. ಆದರೆ, ಚಂದ್ರನ ಸ್ಪರ್ಶದಿಂದ 2.1 ಕಿಲೋಮೀಟರ್ ದೂರವಿರುವಾಗ ವಿಕ್ರಮ್ ಸಂಪರ್ಕ ಕಳೆದುಕೊಂಡಿತ್ತು. ಆ ಬಳಿಕ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವಕ್ಕೆ ಅಪ್ಪಳಿಸಿದೆ ಎಂದು ಇಸ್ರೋ ತಿಳಿಸಿತ್ತು.
2012 ರಿಂದ,ತಮಿಳುನಾಡು ರಾಜಧಾನಿ ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಾಮಕ್ಕಲ್, ಆ ಜಿಲ್ಲೆಯ ಭೂಮಿಯು ಚಂದ್ರನ ಮೇಲ್ಮೈಯನ್ನು ಹೋಲುವುದರಿಂದ, ಚಂದ್ರಯಾನ ಮಿಷನ್ ಸಾಮರ್ಥ್ಯದ ಪರೀಕ್ಷೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೋ) ಮಣ್ಣನ್ನು ಪೂರೈಸಿದ್ದು ವಿಶೇಷ.
ನಾಮಕ್ಕಲ್ ಮಣ್ಣಿನ ಗುಣಲಕ್ಷಣಗಳು ಒಂದೇ ಆಗಿರುವುದರಿಂದ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಲ್ಯಾಂಡರ್ ಮಾಡ್ಯೂಲ್ನ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ಪರಿಷ್ಕರಿಸಲು ಇದು ಇಸ್ರೋಗೆ ಸಹಕಾರಿಯಾಗಿದೆ. ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದರೆ, ಅದರ ಯಶಸ್ಸು ತಮಿಳುನಾಡಿನ ಮಣ್ಣಿಗೂ ಸಲ್ಲಿಸಬೇಕು.
ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಯಶಸ್ವಿಯಾಗಿ ಮೃದುವಾಗಿ ಇಳಿಯುವ ಉದ್ದೇಶವನ್ನು ಸಾಧಿಸಿದರೆ, ಅದು ತಮಿಳುನಾಡು ರಾಜ್ಯಕ್ಕೂ ಹೆಚ್ಚು ಖುಷಿಯನ್ನು ನೀಡುತ್ತದೆ. ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕಾಗಿ ಪರೀಕ್ಷೆಗಳನ್ನು ನಡೆಸಲು ಬೆಂಗಳೂರಿನ ಪ್ರಧಾನ ಕಚೇರಿಯ ಬಾಹ್ಯಾಕಾಶ ಸಂಸ್ಥೆಗೆ ಅಗತ್ಯವಾದ ಮಣ್ಣನ್ನು ತಮಿಳುನಾಡು ಪೂರೈಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.
ಪೆರಿಯಾರ್ ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ನಿರ್ದೇಶಕ ಪ್ರೊಫೆಸರ್ ಎಸ್. ಅನ್ಬಳಗನ್ ಪ್ರಕಾರ, ನಾಮಕ್ಕಲ್ ಪ್ರದೇಶದಲ್ಲಿ ಮಣ್ಣು ಹೇರಳವಾಗಿ ಲಭ್ಯವಿದೆ. ಹೀಗಾಗಿ ಇಸ್ರೋಗೆ ಅಗತ್ಯವಿರುವಷ್ಟು ಮಣ್ಣು ಪೂರೈಸಲು ಸಾಧ್ಯವಾಗಿದೆ ಎಂದಿದ್ದಾರೆ.
ನಾವು ಭೂವಿಜ್ಞಾನದಲ್ಲಿ ಸಂಶೋಧನೆ ನಡೆಸುತ್ತಿದ್ದೇವೆ. ಚಂದ್ರನ ಮೇಲ್ಮೈಯಲ್ಲಿ ಇರುವಂತಹ ಮಣ್ಣನ್ನು ತಮಿಳುನಾಡು ಹೊಂದಿದೆ. ವಿಶೇಷವಾಗಿ ದಕ್ಷಿಣ ಧ್ರುವದಲ್ಲಿರುವ (ಚಂದ್ರನ) ಮಣ್ಣಿಗೆ ನಾಮಕ್ಕಲ್ನ ಮಣ್ಣು ಹೋಲುತ್ತದೆ. ಚಂದ್ರನ ಮೇಲ್ಮೈಯಲ್ಲಿ ‘ಅನೋರ್ಥೋಸೈಟ್’ (ಒಂದು ರೀತಿಯ ಒಳನುಗ್ಗುವ ಅಗ್ನಿಶಿಲೆ) ರೀತಿಯ ಮಣ್ಣು ಇದೆ ಎಂದು ಪ್ರೊಫೆಸರ್ ವಿವರಿಸಿದ್ದಾರೆ.ಚಂದ್ರಯಾನ-3 ಮಿಷನ್ ಅನ್ವೇಷಿಸದೇ ಇರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಇಳಿಸುವ ಗುರಿಯನ್ನು ಹೊಂದಿದೆ. ಇದು ಯುನೈಟೆಡ್ ಸ್ಟೇಟ್ಸ್, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾದ ನಂತರ ಈ ಗಮನಾರ್ಹ ಸಾಧನೆಯನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.
“ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಸುಮಾರು 50 ಟನ್ ಮಣ್ಣನ್ನು ಕಳುಹಿಸಲಾಗಿದೆ. ಇದು ಚಂದ್ರನ ಮೇಲ್ಮೈಯಲ್ಲಿರುವ ಮಣ್ಣನ್ನು ಹೋಲುತ್ತದೆ” ಎಂದು ಸೇಲಂನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ರಿಮೋಟ್ ಸೆನ್ಸಿಂಗ್ ಮತ್ತು ಅಂತರ್ಜಲ ಪರಿಶೋಧನೆಯಲ್ಲಿ ಪರಿಣತಿ ಹೊಂದಿದೆ ಎಂದು ಅನ್ಬಳಗನ್ ಹೇಳಿದ್ದಾರೆ.
”ವಿವಿಧ ಪರೀಕ್ಷೆಗಳನ್ನು ಕೈಗೊಂಡ ನಂತರ, ಇಸ್ರೋದ ವಿಜ್ಞಾನಿಗಳು ನಾಮಕ್ಕಲ್ ಪ್ರದೇಶದಲ್ಲಿ ಲಭ್ಯವಿರುವ ಮಣ್ಣು ಚಂದ್ರನ ಮೇಲ್ಮೈಗೆ ಹೊಂದಿಕೆಯಾಗಿದೆ ಎಂದು ದೃಢಪಡಿಸಿದರು. ನಾವು ಇಸ್ರೋಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಮಣ್ಣನ್ನು ಕಳುಹಿಸುತ್ತಿದ್ದೇವೆ. ಇಸ್ರೋ ವಿಜ್ಞಾನಿಗಳು ನಾವು ಒದಗಿಸಿದ ಮಣ್ಣಿನಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಚಂದ್ರಯಾನ-4 ಮಿಷನ್ ಬಂದರೂ, ನಾವು ಅದಕ್ಕೆ ಮಣ್ಣನ್ನು ಪೂರೈಸಲು ಸಜ್ಜಾಗಿದ್ದೇವೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.