ನ್ಯೂಸ್ ನಾಟೌಟ್: CM ಸಿದ್ದರಾಮಯ್ಯ ಸರ್ಕಾರ ನೂರು ದಿನಗಳ ಪೂರೈಸಿ ಮುನ್ನುಗ್ಗುತ್ತಿದೆ. ಬಹುಮತದ ಸರ್ಕಾರ ಎಂಬ ಹೆಗ್ಗಳಿಕೆಗೆ ಪಡೆದುಕೊಂಡಿದೆ. ಈ ನಡುವೆ ಬಿಜೆಪಿ ಸಿದ್ದು ಸರ್ಕಾರದ ಕಾಲೆಳೆದಿದೆ.
ಟ್ವಿಟ್ಟರ್ ನಲ್ಲಿ ‘ನೂರು ದಿನದ ನೊರೆಂಟು ಕರ್ಮಕಾಂಡ’ ಎಂಬ ವಿಡಿಯೋವನ್ನು ಪ್ರಕಟಿಸಿದೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ರಾಜ್ಯದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ನೂರು ದಿನಗಳಲ್ಲಿ ನೂರೆಂಟು ಕರ್ಮಕಾಂಡಗಳನ್ನು ಮಾಡಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಶತದಿನದ ಸಂಭ್ರಮ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ, ‘ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ನೂರು ದಿನದ ನೂರೆಂಟು ಕರ್ಮಕಾಂಡಗಳು ಇಲ್ಲಿವೆ ನೋಡಿ’ ಎಂದು ವಿಡಿಯೊವೊಂದನ್ನು ಹಂಚಿಕೊಂಡಿದೆ.
‘ಬೆಲೆ ಏರಿಕೆ, ಕಲೆಕ್ಷನ್ ಏಜೆಂಟ್ ರಣದೀಪ್ ಸುರ್ಜೇವಾಲಾ, ಶ್ಯಾಡೋ ಸಿಎಂ ಡಾ.ಯತೀಂದ್ರ ಸಿದ್ದರಾಮಯ್ಯ, ವರ್ಗಾವಣೆ ದಂಧೆ, ರೈತರ ಆತ್ಮಹತ್ಯೆ, ಕಲುಷಿತ ನೀರು, ಕಳಪೆ ಆಹಾರ, ಗುತ್ತಿಗೆದಾರರ ಪ್ರತಿಭಟನೆ, ಉಡುಪಿ ಘಟನೆ, ಸುಳ್ಳು ಸುದ್ದಿ, ಮರಳು ಮಾಫಿಯಾ ಅಬ್ಬಬ್ಬಾ ಒಂದಾ ಎರಡಾ…ಅಸಮರ್ಥ ಸರ್ಕಾರದ ಹಳವಂಡಗಳ ಬೃಹತ್ ಪಟ್ಟಿಯೇ ಇಲ್ಲಿದೆ ನೋಡಿ…’ ಎಂದು ಬರೆದುಕೊಂಡಿದೆ.
‘ರಾಜ್ಯ ಸರ್ಕಾರದ ಗ್ಯಾರಂಟಿ ನೆಪದಿಂದಾಗಿ ಒಂದು ವರ್ಷದ ಅಭಿವೃದ್ಧಿಯ ಎಲ್ಲ ಕಾಮಗಾರಿಗಳು ಸಂಪೂರ್ಣ ನಿಂತು ಹೋಗಿದೆ. ಕಾಂಗ್ರೆಸ್ ಸರ್ಕಾರ ವರ್ಗಾವಣೆಯನ್ನು ಒಂದು ಕಮಿಷನ್ ದಂಧೆಯಾಗಿ ಮಾಡಿ, ವಿಧಾನಸೌಧದ ಮೂಲೆ ಮೂಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರ ಬಿಲ್ ಬಾಕಿ ಇಟ್ಟುಕೊಂಡು ಕಮಿಷನ್ ದಂಧೆಗೆ ಮುಂದಾಗಿದೆ’ ಎಂದು ಮಾಜಿ ಸಿಎಂ ಬವಸರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
‘ರೈತರು ಬರಗಾಲದ ಬವಣೆಯಲ್ಲಿ ಸಿಕ್ಕರೂ ಕೂಡ ಸರ್ಕಾರ ಆ ಕಡೆ ತಿರುಗಿ ನೋಡಿಲ್ಲ. ರೈತರ ಆತ್ಮಹತ್ಯೆ ಮತ್ತೆ ಪ್ರಾರಂಭವಾಗಿದೆ. ಕೃಷಿ ಉತ್ಪಾದನೆಗೆ ಪೆಟ್ಟು ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ. ಪೂರ್ಣ ಪ್ರಮಾಣದ ಗ್ಯಾರಂಟಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಒಂದು ಕಡೆ ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಶಾಕ್ ಕೊಟ್ಟಿದೆ. ಸಾರಿಗೆ ಸಿಬ್ಬಂದಿಗೆ ಸಮರ್ಪಕವಾದ ಸಂಬಳ ನೀಡಿಲ್ಲ. 10 ಕೆಜಿ ಅಕ್ಕಿ ಗ್ಯಾರಂಟಿಯನ್ನು ಈಡೇರಿಸಲಾಗಿಲ್ಲ. ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿಯೇ ಜನರ ಸಹಾಯಕ್ಕೆ ಬಂದಿದೆ’ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.