ನ್ಯೂಸ್ ನಾಟೌಟ್: ಅಧಿಕಾರವಿಲ್ಲದ ರಾಜ್ಯ ಬಿಜೆಪಿ ಈಗ ಹೈಕಮಾಂಡ್ ನಾಯಕರಿಗೆ ಹಾಲು ಕರೆಯದ ಗೊಡ್ಡೆಮ್ಮೆಯಂತಾಗಿದೆಯೇ? ಎಂದು ಕಾಂಗ್ರೆಸ್ ವ್ಯಂಗ್ಯವಾಗಿ ಪ್ರಶ್ನಿಸಿದೆ. #BJPvsBJP ಹ್ಯಾಶ್ಟ್ಯಾಗ್ ಬಳಸಿ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಬಿಜೆಪಿ ಈಗ ಅನಾಥ ಶಿಶುವಾಗಿದೆ’ ಎಂದು ಟೀಕಿಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿರುವ ಬಿಜೆಪಿ ವಿರೋಧ ಪಕ್ಷದ ನಾಯಕ ಹಾಗೂ ರಾಜ್ಯಾಧ್ಯಕ್ಷರ ಆಯ್ಕೆಗೆ ಇನ್ನಿಲ್ಲದ ಸರ್ಕಸ್ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ಈ ರೀತಿ ಟೀಕೆ ನಡೆಸಿದೆ. ‘ಬಿಜೆಪಿಯಲ್ಲಿ ಈಗ ಆಂತರಿಕ ಕಲಹ ಮುಗಿಲು ಮುಟ್ಟಿದೆ, ಪಕ್ಷವನ್ನು ಮುನ್ನಡೆಸಲಾಗದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ, ಹೈಕಮಾಂಡ್ ಕರ್ನಾಟಕದ ಬಿಜೆಪಿಯತ್ತ ತಿರುಗಿಯೂ ನೋಡುತ್ತಿಲ್ಲ, ವಾರಕ್ಕೊಮ್ಮೆ ಬರುತ್ತಿದ್ದ ಉಸ್ತುವಾರಿ ಅರುಣ್ ಸಿಂಗ್ ನಾಪತ್ತೆ, ತಿಂಗಳಿಗೊಮ್ಮೆ ಬರುತ್ತಿದ್ದ ಜೆಪಿ ನಡ್ಡಾ ನಾಪತ್ತೆ’ಯಾಗಿದ್ದಾರೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.
ಮುಂದುವರಿದು ‘ಚುನಾವಣೆಗಾಗಿ ಬರುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿಯವರೂ ಕಣ್ಮರೆಯಾಗಿದ್ದಾರೆ. ರಾಜ್ಯದಲ್ಲಿ ಅಧಿಕಾರವಿದ್ದಾಗ ಇವರೆಲ್ಲಾ ATMನಲ್ಲಿನ ಹಣ ಡ್ರಾ ಮಾಡಿಕೊಳ್ಳಲು ಬರುತ್ತಿದ್ದರಾ ಬಿಜೆಪಿ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
‘ಮುಖಂಡರನ್ನು ಉಚ್ಛಾಟಿಸುವ ಮೂಲಕ ಬಿಜೆಪಿ ತನ್ನ ಆಂತರಿಕ ಕಲಹ ಇದೆ ಎಂಬ ಸರ್ಟಿಫಿಕೇಟಿಗೆ ಅಧಿಕೃತವಾಗಿ ಮುದ್ರೆ ಒತ್ತಿದೆ. ಡಿಯರ್ ಬಿಜೆಪಿ, ಇದೇ ರೀತಿ ಪ್ರಭು ಚೌಹಾಣ್ರಿಗೆ ಕಾಟ ಕೊಡುತ್ತಿರುವ ಭಗವಂತ ಖೂಬಾರನ್ನು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಮೇಲೆ ಆರೋಪಿಸಿದ್ದ ಸಂಸದ ಪ್ರತಾಪ್ ಸಿಂಹರನ್ನು, ಬಿ.ಎಸ್.ಯಡಿಯೂರಪ್ಪರ ಮೇಲೆ ಕಿಡಿಕಾರಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಉಚ್ಛಾಟನೆ ಮಾಡುವಿರಾ?’ ಎಂದು ಪ್ರಶ್ನಿಸಿದೆ.
ಬಿಜೆಪಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡದೆ ಇರುವುದು ಆಡಳಿತ ಪಕ್ಷ ಕಾಂಗ್ರೆಸ್ ಗೆ ಒಂದು ದೊಡ್ಡ ಅಸ್ತ್ರವಾಗಿದ್ದು, ಚುನಾವಣಾ ಸಂದರ್ಭದಲ್ಲಿ ಭೇಟಿ ನೀಡುತ್ತಿದ್ದ ಬಿಜೆಪಿ ಹೈಕಮಾಂಡ್ ನಾಯಕರು ಈಗ ಭೇಟಿ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.