ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ತಾಯಿಯ ಎದೆಹಾಲು ಮಗುವಿನ ಶ್ವಾಸಕೋಶಕ್ಕೆ ಹೋದ ಪರಿಣಾಮ ಮೂರು ತಿಂಗಳ ಮಗು ದಾರುಣವಾಗಿ ಕೊನೆಯುಸಿರೆಳೆದಿತ್ತು, ಈಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಅಣ್ಣನ ಹುಟ್ಟುಹಬ್ಬದಂದು ತರಾತುರಿಯಲ್ಲಿ ಕೇಕ್ ತಿಂದು ಎಂಟು ವರ್ಷದ ಬಾಲಕ ಪ್ರಾಂಜಲ್ ಶ್ರೀವಾಸ್ತವ್ ಎಂಬ ಮಗು ಸಾವನ್ನಪ್ಪಿರುವ ಘಟನೆ ವಾರಣಾಸಿಯಲ್ಲಿ ನಡೆದಿದೆ. ಶ್ವಾಸನಾಳವನ್ನು ತಲುಪಿದ ನಂತರ ಕೇಕ್ ಸಿಲುಕಿಕೊಂಡಿದ್ದು, ಮಗುವಿನ ಆರೋಗ್ಯ ಹದಗೆಟ್ಟಾಗ, ಸಂಬಂಧಿಕರು ಅವನನ್ನು ನಾಲ್ಕು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.
ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದ ಇಡೀ ಕುಟುಂಬವು ಈಗ ದುಃಖದಲ್ಲಿ ಮುಳುಗಿದೆ. ಸೋಮವಾರ ಜನ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ, ಸಜೋಯಿ ಗ್ರಾಮದ ಶಿಕ್ಷಕ ಧೀರಜ್ ಶ್ರೀವಾಸ್ತವ ಅವರ ಹಿರಿಯ ಪುತ್ರ ಪ್ರಖರ್ ಅವರ ಜನ್ಮದಿನದಂದು ತಡರಾತ್ರಿ ಕೇಕ್ ಕತ್ತರಿಸಿದ ಬಳಿಕ ಕಿರಿಯ ಸಹೋದರ ಪ್ರಾಂಜಲ್ ಕೇಕ್ ತಿಂದು ಆರೋಗ್ಯ ಹದಗೆಟ್ಟಿದೆ.
ಸಂಬಂಧಿಕರು ರಾತ್ರಿ ಒಂದು ಗಂಟೆಗೆ ಹತ್ತಿರದ ಸಾಯಿ ನರ್ಸಿಂಗ್ ಹೋಮ್ಗೆ ಕರೆದೊಯ್ದಿದ್ದು, ಆ ನಂತರ ಚೈಲ್ಡ್ ಕೇರ್ ಆಸ್ಪತ್ರೆ, ಕೊನೆಗೆ ಹೆರಿಟೇಜ್ ಆಸ್ಪತ್ರೆಗೆ ಕರೆದೊಯ್ದರು. ಕೊನೆಯಲ್ಲಿ ಜನಪ್ರಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತಾದರೂ ಮಗು ಬದುಕುಳಿಯಲಿಲ್ಲ.
ಆದರೆ ಮಂಗಳವಾರ ಬೆಳಗ್ಗೆ 9 ಗಂಟೆಯವರೆಗೆ ಬಾಲಕನನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳು ವ್ಯರ್ಥವಾಗಿದೆ.“ನನ್ನ ಮಗನ ಶ್ವಾಸನಾಳಕ್ಕೆ ಕೇಕ್ ತಗುಲಿ ಉಸಿರಾಟದತೊಂದರೆಯಾಗಿ ಸಾವನ್ನಪ್ಪಿದ್ದಾನೆ” ಎಂದು ಮಗುವಿನ ತಂದೆ ಧೀರಜ್ ತಿಳಿಸಿದ್ದಾರೆ. ಇಬ್ಬರು ಸಹೋದರರಲ್ಲಿ ಕಿರಿಯವನಾದ ಪ್ರಾಂಜಲ್ ಜ್ಞಾನದಾಯಿನಿ ಮಕ್ಕಳ ಶಾಲೆಯಲ್ಲಿ ಓದುತ್ತಿದ್ದನು ಎನ್ನಲಾಗಿದೆ.