ನ್ಯೂಸ್ ನಾಟೌಟ್: ಬಿಗ್ ಬಾಸ್ ಸ್ಪರ್ಧಿಯಾಗಿ ಮಿಂಚಿದ್ದ ಕಿರಿಕ್ ಕೀರ್ತಿ ಶುಕ್ರವಾರ (ಆಗಸ್ಟ್ 18) ಮಹತ್ವದ ಘೋಷಣೆ ಮಾಡಿದ್ದಾರೆ. ತಮ್ಮ ವೈವಾಹಿಕ ಜೀವನ ಮುಕ್ತಾಯಗೊಂಡಿರುವುನ್ನು ಬಹಿರಂಗಪಡಿಸಿದ್ದಾರೆ.
ಎರಡು ದಿನಗಳ ಹಿಂದೆ ನಾಡು, ದೇಶ, ಧರ್ಮ, ಭಾಷೆ, ಸಿದ್ಧಾಂತಗಳ ವಿಚಾರದಲ್ಲಿ ತಮ್ಮ ನಿಲುವನ್ನು ಪ್ರಕಟಿಸಿದ್ರು. ಈ ಬೆನ್ನಿಗೇ ಅವರು ಇದೀಗ ವೈವಾಹಿಕ ಬದುಕಿನ ಕುರಿತ ತೀರ್ಮಾನವನ್ನೂ ಪ್ರಕಟಿಸಿದ್ದಾರೆ. ನಾಡು, ನುಡಿ, ದೇಶ, ಧರ್ಮದ ಕುರಿತು ಮಾತನಾಡಿದ್ದಕ್ಕೆ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದೆ. ಜೊತೆಗೆ ಜೀವ ಬೆದರಿಕೆಯೂ ಇತ್ತು. ವೈಯಕ್ತಿಕ ಜೀವನದ ತೇಜೋವಧೆಗಳಾಗಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದ್ದರು.
ತನ್ನನ್ನು ಸೈದ್ಧಾಂತಿಕವಾಗಿ, ವೈಚಾರಿಕವಾಗಿ ವಿರೋಧಿಸುವವರು ತನ್ನ ಕುಟುಂಬಸ್ಥರನ್ನು ಉದ್ದೇಶಿಸಿ ಅವಹೇಳನಕಾರಿ ಆಗಿ ಮಾತನಾಡುತ್ತಿದ್ದುದರ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ ನನ್ನ ಕುಟುಂಬಸ್ಥರ ಹಿತದ ದೃಷ್ಟಿಯಿಂದ ಇನ್ನು ನನ್ನ ಸಿದ್ಧಾಂತ, ನಾಡು-ನುಡಿ, ದೇಶ-ಧರ್ಮದ ಮೇಲಿನ ಅಭಿಮಾನ ಮನಸ್ಸಿನಲ್ಲಿ ಮಾತ್ರ ಇರಲಿದೆ, ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂಬ ನಿರ್ಧಾರ ಎರಡು ದಿನಗಳ ಹಿಂದೆ ಪ್ರಕಟಿಸಿದ್ದರು.
ಇಂದು ವಿಚ್ಛೇದನ ಕುರಿತು ಮಾಹಿತಿ ಪ್ರಕಟಿಸಿದ್ದಾರೆ. ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ ಎಂದು ಕಿರಿಕ್ ಕೀರ್ತಿ ತಮ್ಮ ವಿಚ್ಛೇದನವನ್ನು ಪ್ರಕಟಿಸಿದ್ದಾರೆ.
ಈ ಪೋಸ್ಟ್ ಗೆ ಅವರು ‘ಸಕಲವೂ ಸನ್ಮಂಗಳವಾಗಲಿ’ ಎಂದು ಕ್ಯಾಪ್ಶನ್ ಸಹ ಬರೆದಿದ್ದಾರೆ. ತಮ್ಮ ಮತ್ತೊಂದು ಪೋಸ್ಟ್ ನಲ್ಲಿ ಅವರು ಪುತ್ರನ ಜೊತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಕೆಲ ಕಾರಣಗಳಿಂದ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದೆ ಅನ್ನೋ ಮಾಹಿತಿಯನ್ನು ಕಿರಿಕ್ ಕೀರ್ತಿ ತಿಳಿಸಿದ್ದರು.