ನ್ಯೂಸ್ ನಾಟೌಟ್: ರಾಜ್ಯದಾದ್ಯಂತ ಸೌಜನ್ಯ ಅತ್ಯಾಚಾರ, ಹತ್ಯೆ ವಿಚಾರ ಹನ್ನೊಂದು ವರ್ಷಗಳ ಬಳಿಕ ಭಾರಿ ಸದ್ದಾಗುತ್ತಿದೆ. ಸೌಜನ್ಯಳಿಗೆ ನ್ಯಾಯ ಒದಗಿಸಬೇಕು ಅನ್ನುವ ಕೂಗು ಹಳ್ಳಿ -ಹಳ್ಳಿಯಿಂದಲೂ ಕೇಳಿ ಬರುತ್ತಿದೆ. ಈ ನಡುವೆ ಸೌಜನ್ಯಳಿಗೆ ನ್ಯಾಯ ಸಿಗಲಿ ಅನ್ನುವ ಬ್ಯಾನರ್ ಎಲ್ಲ ಕಡೆ ರಾರಾಜಿಸುತ್ತಿದ್ದು ಬೆಳ್ತಂಗಡಿಯಲ್ಲಿ ಸೌಜನ್ಯ ಬ್ಯಾನರ್ ಸೇರಿದಂತೆ ಅನಧಿಕೃತ ಬ್ಯಾನರ್ ಅನ್ನು ತೆರವುಗೊಳಿಸುವುದಕ್ಕೆ ಪೊಲೀಸರು ಪತ್ರ ಮೂಲಕ ಮನವಿ ಮಾಡಿದ್ದಾರೆ.
ಪತ್ರದ ಸಾರಾಂಶ ಇಂತಿದೆ
ಪೊಲೀಸ್ ವೃತ್ತ ನಿರೀಕ್ಷಕ ಬೆಳ್ತಂಗಡಿಯವರು ಕಾರ್ಯ ನಿರ್ವಹಣಾಧಿಕಾರಿಗೆ ತಮ್ಮ ಮನವಿಯನ್ನು ಮಾಡಿದ್ದಾರೆ. ಈ ಪತ್ರದ ಸಾರಾಂಶ ಇಂತಿದೆ ನೋಡಿ, ‘ಈ ಮೇಲಿನ ವಿಷಯ ಮತ್ತು ಉಲ್ಲೇಖದ ಬಗ್ಗೆ ನಿವೇದಿಸಿಕೊಳ್ಳುವುದೇನೆಂದರೆ ಪ್ರಜ್ಞಾವಂತ ನಾಗರಿಕರು ಬೆಳ್ತಂಗಡಿ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ. ಇಲಾಖೆಯ ವರಿಷ್ಠಾಧಿಕಾರಿಯೊಂದಿಗೆ ಸಲ್ಲಿಸಿದ ದೂರು ಅರ್ಜಿಯಲ್ಲಿ ಕು ಸೌಜನ್ಯ ಪ್ರಕರಣದ ತೀರ್ಪನ್ನು ಬಹಿರಂಗವಾಗಿ ಟೀಕಿಸಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕದಡುವ ನಿಟ್ಟಿನಲ್ಲಿ ಯಾರು ಯಾರನ್ನೋ ಆರೋಪಿತರನ್ನಾಗಿ ಬಿಂಬಿಸಿಕೊಂಡು ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡುತ್ತದೆ. ನ್ಯಾಯಾಂಗ ಮತ್ತು ತನಿಖಾ ಸಂಸ್ಥೆಗಳನ್ನು ಸಾರ್ವಜನಿಕವಾಗಿ ಟೀಕಿಸುತ್ತಾ ಈ ಬಗ್ಗೆ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ಗಳನ್ನು ಅಳವಡಿಸಿ ಜನ ಸಾಮಾನ್ಯರಲ್ಲಿ ವೈರುದ್ಯ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬಿತ್ಯಾದಿಯಾಗಿ ದೂರನ್ನು ನೀಡಿರುತ್ತಾರೆ. ಇದರಿಂದಾಗಿ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಿದೆ.
ಆದುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಕಾನೂನು ಬಾಹಿರವಾಗಿ ಅಳವಡಿಸಿರುವ ರಾಜಕೀಯ, ಧಾರ್ಮಿಕ ಹಾಗೂ ಸೌಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಬ್ಯಾನರ್ ಬಂಟಿಂಗ್ಸ್, ಫ್ಲೆಕ್ಸ್ ಗಳನ್ನು ಕೂಡಲೇ ತೆರವುಗೊಳಿಸುವ ಬಗ್ಗೆ ಎಲ್ಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ನಿರ್ದೇಶನ ನೀಡಿ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂದು ಬರೆಯಲಾಗಿದೆ.