ನ್ಯೂಸ್ ನಾಟೌಟ್ : ಮಹಿಳೆಗೆ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬುಲೆನ್ಸ್ ಪಲ್ಟಿಯಾಗಿ ಚಾಲಕ ಮೃತ ಪಟ್ಟಿರುವ ಘಟನೆ ವಗ್ಗದಲ್ಲಿ ಮೊನ್ನೆಯಷ್ಟೆ ವರದಿಯಾಗಿತ್ತು. ಇದೀಗ ಆ್ಯಂಬುಲೆನ್ಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಳದಂಗಡಿ ಸನಿಹದ ಬಡಗ ಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿ. ಹಸನ್ ಅವರ ಪತ್ನಿ ಮರಿಯಮ್ಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಶುಕ್ರವಾರ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಲ್ಲಿ ಇಸಿಜಿ ಸಹಿತ ತುರ್ತು ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್ ಇರುವುದರಿಂದ ವೈದ್ಯರು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು.
ಈ ವೇಳೆ ಆ್ಯಂಬುಲೆನ್ಸ್ ಚಾಲಕ ಶಬೀರ್ ಅವರು ಆ್ಯಂಬುಲೆನ್ಸ್ ನಲ್ಲಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ವಗ್ಗ ಬಳಿ ಅಪಘಾತ ನಡೆದಿತ್ತು.ದುರದೃಷ್ಟವಶಾತ್ ಚಾಲಕ ಶಬೀರ್ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ಮರಿಯಮ್ಮ ಅವರು ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವ ಕೂಡ ಆಗಿತ್ತು. ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಸೋಮವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಆ್ಯಂಬುಲೆನ್ಸ್ನಲ್ಲಿ ಅವರ ಜತೆ ಇದ್ದ ಪುತ್ರ ರಝಾಕ್ ಅವರ ಕೈ ಮೂಳೆ ಮುರಿತಕ್ಕೊಳಗಾಗಿದ್ದು,ಸದ್ಯ ಚಿಕಿತ್ಸೆಯಲ್ಲಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.