ನ್ಯೂಸ್ ನಾಟೌಟ್ : ಗಂಡ-ಹೆಂಡತಿ ಸಂಬಂಧ ಅದು ಏಳೇಳು ಜನುಮಗಳ ಬಂಧ.ಹುಡುಗ ಹುಡುಗಿಯನ್ನು ಅಥವಾ ಹುಡುಗಿ ಹುಡುಗನನ್ನು ಒಪ್ಪಿ ಮದುವೆಯಾಗಿ ಜೀವನ ಪೂರ್ತಿ ಆತ ಅಥವಾ ಆಕೆಯೊಂದಿಗಿದ್ದು ಪರಸ್ಪರ ಕಷ್ಟ – ಸುಖಗಳಲ್ಲಿ ಭಾಗಿಯಾಗಿ ಜೀವನದ ಕೊನೆ ಕ್ಷಣದವರೆಗೂ ಒಂದೇ ಉಸಿರಾಗಿರುವಂತೆ ಬದುಕುವುದೇ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ.ಆದರೆ ಈ ಸಾಮಾಜಿಕ ಜಾಲತಾಣಗಳು ಬಂದ ಮೇಲಂತು ಫೇಸ್ ಬುಕ್ , ಇನ್ಸ್ಟಾಗ್ರಾಮ್ ಲವ್ ಜಾಸ್ತಿಯಾಗಿ ಬಿಟ್ಟಿದೆ. ಮದುವೆಯಾಗದವರು , ಮದುವೆಯಾದವರು ಗೊತ್ತು ಗುರಿಯಿಲ್ಲದ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿ ಅವರ ಜತೆ ಪರಾರಿಯಾಗುತ್ತಿರುವ ಘಟನೆಗಳು ಇದೀಗ ವರದಿಯಾಗುತ್ತಲೇ ಇದೆ.
ಹೌದು, ಮೊನ್ನೆಯಷ್ಟೇ ಫೇಸ್ಬುಕ್ನಲ್ಲಿ ಪರಿಚಯವಾದ ಗೆಳೆಯನಿಗಾಗಿ ಗಂಡ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ (Pakistan) ತೆರಳಿ, ಪ್ರಿಯತಮ ನಸ್ರುಲ್ಲಾನನ್ನು ಮದುವೆಯಾದ(Anju Love Story) ರಾಜಸ್ಥಾನದ ಅಂಜು ಈಗ ಉಲ್ಟಾ ಹೊಡೆದಿರುವ ಬಗ್ಗೆ ವರದಿಯಾಗಿದೆ.ನಾನು ಏನೋ ತಿಳಿದು ಕೊಂಡು ಇಲ್ಲಿಗೆ ಬಂದಿದ್ದೆ ಆದರೆ ಇಲ್ಲಿ ಯಾವುದು ಸರಿ ಇಲ್ಲ , ನನ್ನಿಂದ ತಪ್ಪಾಗಿದೆ ಎನ್ನುವ ಹೇಳಿಕೆ ಕೊಟ್ಟಿದ್ದಾಳೆ ಭಾರತದ ಅಂಜು…
“ನಾನಿಲ್ಲಿ ಖುಷಿಯಿಂದ ಇಲ್ಲ, ನನ್ನಿಂದ ತಪ್ಪಾಗಿದೆ. ಹಾಗಾಗಿ, ನಾನು ಭಾರತಕ್ಕೆ ವಾಪಸ್ ಬರುತ್ತೇನೆ” ಎಂಬುದಾಗಿ ಅಂಜು ಹೇಳಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.“ಪಾಕಿಸ್ತಾನದಲ್ಲಿ ಎಲ್ಲವೂ ಚೆನ್ನಾಗಿದೆ. ನಾನು ಬೇರಾವುದೋ ಆಲೋಚನೆಗಳನ್ನು ಇಟ್ಟುಕೊಂಡು ಇಲ್ಲಿಗೆ ಬಂದಿದ್ದೆ. ಆದರೆ, ನಾನಿಲ್ಲಿ ಖುಷಿಯಿಂದ ಇಲ್ಲ. ನಾನು ಮಾಡಿದ ತಪ್ಪಿನ ಅರಿವಾಗಿದೆ. ಇಲ್ಲಿ ನಡೆದಿರುವುದಕ್ಕೆ ಭಾರತದಲ್ಲಿ ನನ್ನ ಕುಟುಂಬಸ್ಥರು ಅವಮಾನಿತರಾಗಿದ್ದಾರೆ. ಅವರು ನನ್ನಿಂದ ತೊಂದರೆ ಅನುಭವಿಸಿದ್ದಾರೆ. ನನ್ನ ಮಕ್ಕಳ ಮುಖವನ್ನು ನೆನೆದರೆ ನನಗೆ ಸಂಕಟವಾಗುತ್ತಿದೆ. ಹಾಗಾಗಿ, ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ” ಎಂಬುದಾಗಿ ಅಂಜು ಹೇಳಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.
“ನಾನು ಭಾರತಕ್ಕೆ ಹೋಗಲು ಬಯಸುತ್ತೇನೆ. ನಾನೊಬ್ಬಳೇ ಎಲ್ಲವನ್ನೂ ಎದುರಿಸುತ್ತೇನೆ. ಮಾಧ್ಯಮದವರಿಗೆ ನಡೆದ ಎಲ್ಲ ಘಟನೆಯನ್ನು ಹೇಳುತ್ತೇನೆ. ಅವರ ಎಲ್ಲ ಪ್ರಶ್ನೆಗಳಿಗೂ ನನ್ನ ಬಳಿ ಉತ್ತರವಿದೆ. ಪಾಕಿಸ್ತಾನದಲ್ಲಿ ನನ್ನ ಮೇಲೆ ಯಾವುದೇ ರೀತಿಯ ಒತ್ತಡ, ಒತ್ತಾಯ ಹೇರಿಲ್ಲ ಎಂಬುದನ್ನು ಹೇಳಲು ಇಚ್ಛಿಸುತ್ತೇನೆ. ನಾನು ಪಾಕಿಸ್ತಾನಕ್ಕೆ ಬಂದಿದ್ದು ನನ್ನ ನಿರ್ಧಾರದಿಂದಲೇ ಹೊರತು, ಒತ್ತಾಯಕ್ಕಲ್ಲ. ಮಾಧ್ಯಮಗಳ ಒತ್ತಡದಿಂದಾಗಿ ನಾನು ಪಾಕಿಸ್ತಾನಕ್ಕೆ ಬಂದ ಆರಂಭದಲ್ಲೇ ವಾಪಸಾಗಲು ಆಗಲಿಲ್ಲ. ನಾನು ನನ್ನ ಮಕ್ಕಳನ್ನು ನೋಡಬೇಕು. ಹಗಲು-ರಾತ್ರಿ ಅವರ ನೆನಪು ಕಾಡುತ್ತಿದೆ” ಎಂದು ಅಂಜು ಬೇಸರ ವ್ಯಕ್ತಪಡಿಸಿದ್ದಾರೆ.
ತನ್ನ ಗಂಡ ಹಾಗೂ ಮಕ್ಕಳನ್ನು ಬಿಟ್ಟು ಹೋದ ಮಹಿಳೆಯನ್ನು ಮನೆ ಕಡೆ ಸ್ವೀಕರಿಸಬಲ್ಲರೇ ಎನ್ನುವ ಪ್ರಶ್ನೆ ಎದ್ದಿದೆ. ಯಾಕೆಂದರೆ ಪ್ರೇಮಿಗಾಗಿ ಪಾಕಿಸ್ತಾನಕ್ಕೆ ಹೋದ ಅಂಜು ಇಸ್ಲಾಂಗೆ ಮತಾಂತರವಾಗಿದ್ದಾರೆ. ಮತಾಂತರದ ಬಳಿಕವೇ ಅವರು ನಸ್ರುಲ್ಲಾನನ್ನು ಮದುವೆಯಾಗಿದ್ದು, ಈಗ ಅವರ ಹೆಸರು ಫಾತಿಮಾ ಆಗಿದೆ.ಹೀಗಾಗಿ ಅಂಜು ಹಾಗೂ ನಸ್ರುಲ್ಲಾ ಅವರ ಪ್ರಿ ವೆಡ್ಡಿಂಗ್ ಶೂಟ್ ವಿಡಿಯೊ ಕೂಡ ಭಾರಿ ವೈರಲ್ ಆಗಿತ್ತು. ಇನ್ನು ಪತಿ ಹಾಗೂ ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ಓಡಿ ಹೋದ ಅಂಜು ನಮ್ಮ ಪಾಲಿಗೆ ಸತ್ತ ಹಾಗೆ ಎಂದು ಆಕೆಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ, ಇಷ್ಟೆಲ್ಲ ವಿರೋಧ ಎದುರಿಸುತ್ತಿರುವ ಅಂಜು ಭಾರತಕ್ಕೆ ಬಂದು ಅವರನ್ನೆಲ್ಲ ಹೇಗೆ ಒಪ್ಪಿಸುತ್ತಾರೆ.ಗಂಡನ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದೇ ಸದ್ಯ ಇರುವ ಕುತೂಹಲ.