ವಿಶೇಷ ವರದಿ: ಅಭಿಷೇಕ್ ಗುತ್ತಿಗಾರು
ನ್ಯೂಸ್ ನಾಟೌಟ್: ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸಿ ಅನ್ನುವ ಕೂಗು ಬಹಳ ಹಿಂದಿನಿಂದಲೇ ಕೇಳಿ ಬರುತ್ತಿದೆ. ಈ ನಡುವೆ ಸರ್ಕಾರಿ ಕನ್ನಡ ಶಾಲೆಯೊಂದು ಬಹುತೇಕ ಕುಸಿಯುವ ಭೀತಿಯಲ್ಲಿದ್ದು ಅದಕ್ಕೆ ಊರವರು ಕಂಬ ಕೊಟ್ಟು ನಿಲ್ಲಿಸಿದ್ದಾರೆ.
ಈಗಲೋ ಆಗಲೋ ಕುಸಿಯುವ ಭೀತಿಯಲ್ಲಿರುವ ಶಾಲೆಯಲ್ಲಿ ಪಾಠ ಮಾಡುವುದಕ್ಕೂ ಭಯ. ಏನಾದರೂ ಹೆಚ್ಚು ಕಮ್ಮಿ ಆದರೆ ನೂರಾರು ಮಕ್ಕಳ ಜೀವಕ್ಕೆ ಅಪಾಯವಿದೆ. ಈ ಹಿನ್ನೆಲೆಯಲ್ಲಿ 72 ಮಕ್ಕಳಿದ್ದ ಶಾಲೆಯಲ್ಲಿ ಪ್ರಸ್ತುತ 12 ಮಕ್ಕಳು ಮಾತ್ರ ವ್ಯಾಸಂಗ ಮಾಡುತ್ತಿದ್ದಾರೆ.
ಸರ್ಕಾರಿ ಶಾಲೆ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅನ್ನುವುದಕ್ಕೆ ಅಜ್ಜಾವರ ಗ್ರಾಮದ ದೊಡ್ಡೇರಿ ಸರಕಾರಿ ಮಾದರಿ ಕಿರಿಯ ಪ್ರಾಥಮಿಕ ಶಾಲೆ ಪ್ರತ್ಯಕ್ಷ ಉದಾಹರಣೆ. ಸದ್ಯ ಶಾಲೆಯ ಸುತ್ತ ಒಂದು ನೋಟ ಹಾಕಿದರೆ ಅಲ್ಲಲ್ಲಿ ಕಂಬ ಕೊಟ್ಟು ನಿಲ್ಲಿಸಿದ ದೃಶ್ಯ ಕಾಣುತ್ತದೆ. ನಾವು ದನದ ಕೊಟ್ಟಿಗೆಗೆ, ಬಾಳೆ ಗೊನೆಗೆ ಆಧಾರವಾಗಿ ಕಂಬ ಕೊಡುವುದನ್ನು ನೋಡಿದ್ದೇವೆ. ಆದರೆ ಇಟ್ಟಿಗೆ ಕಲ್ಲುಗಳಿಂದ ಕಟ್ಟಿದ ಶಾಲೆಗೆ ಕಂಬ ಕೊಡುವುದನ್ನು ಇತಿಹಾಸದಲ್ಲಿ ಮೊದಲ ಬಾರಿಗೆ ನೋಡಿದ ಅನುಭವ ಆಗುತ್ತದೆ. ಇಂತಹ ಶಾಲೆಯಲ್ಲಿ ಯಾವ ಮಕ್ಕಳನ್ನು ಕಳುಹಿಸಲು ಪೋಷಕರು ಇಷ್ಟಪಡುತ್ತಾರೆ ಹೇಳಿ. ಅಂತಹ ಸ್ಥಿತಿಯಲ್ಲಿರುವ ಅಜ್ಜಾವರ ದೊಡ್ಡೇರಿ ಶಾಲೆಗೆ ಈಗ ಅಡಿಗೆಯ ಕೋಣೆಯಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.\
ಶಾಲೆಗೆ ಕಂಬ ಕೊಟ್ಟು ನಿಲ್ಲಿಸಿರುವುದರಿಂದ ಮಕ್ಕಳಿಗೆ ಈಗ ಅಡುಗೆ ಮನೆಯೊಳಗೆ ಪಾಠ ಕೇಳುವಂತಾಗಿದೆ. ಅದೇ ಕೊಠಡಿಯಲ್ಲಿ ಅಡುಗೆಯೂ ಆಗಬೇಕು ಮಕ್ಕಳು ಇತ್ತ ಪಾಠ ಕೇಳಲೂ ಬೇಕು. ಮಾತ್ರವಲ್ಲ ಶಿಕ್ಷಕರ ಸ್ಟಾಪ್ ರೂಂ ಕೂಡ ಅದೇ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಕ್ರಾಂತಿ ಮಾಡಿರುವ ಸುಳ್ಯ ನಗರದಿಂದ ಕೆಲವೇ ಕೆಲವು ಕಿ.ಮೀ. ಅಂತರದಲ್ಲಿ ಈ ಶಾಲೆ ಇದೆ. ಈ ಹಿಂದಿನ ಸರಕಾರದ ಅವಧಿಯಲ್ಲಿ ಶಾಸಕ ಎಸ್. ಅಂಗಾರರ ಮುತುವರ್ಜಿಯಲ್ಲಿ ಮಳೆಹಾನಿ ಪರಿಹಾರ ನಿಧಿಯಲ್ಲಿ ಸುಮಾರು 7 ಲಕ್ಷ ರೂಪಾಯಿಗಳಲ್ಲಿ ದುರಸ್ತಿ ಮಾಡಲು ಹಣ ಮಂಜೂರಾಗಿತ್ತು. ಎಂಜಿನಿಯರಿಂಗ್ ವಿಭಾಗಕ್ಕೆ ಹಣವೂ ಬಂದಿತ್ತು. ಆ ಹಣ ವಾಪಸ್ ಹೋಗಬಾರದು ಎಂಬ ಕಾರಣಕ್ಕೆ ಅಜ್ಜಾವರ ಪಂಚಾಯತ್ ಗೆ ವರ್ಗಾವಣೆ ಮಾಡಿದ್ದರು.
ಸಿಎಂ ಸಿದ್ದರಾಮಯ್ಯರ ಸರಕಾರದ ಆದೇಶದನ್ವಯ ಹೊಸ ಕಾಮಗಾರಿಗಳು ಮಾಡಬಾರದು ಎಂಬ ಹಿನ್ನಲೆಯಲ್ಲಿ ಈ ಅನುದಾನವನ್ನು ಹಿಂದಕ್ಕೆ ಪಡೆಯಲಾಯಿತು. ಹೀಗಾಗಿ ಕಟ್ಟಡ ನಿರ್ಮಾಣದ ಯೋಜನೆ ನೆನೆಗುದಿಗೆ ಬಿತ್ತು. ಇದರಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಈಗ ನಿತ್ಯ ಸಂಕಟ ಅನುಭವಿಸುವಂತಾಗಿದೆ.
ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಅನ್ನುವ ಕಾರಣಕ್ಕೆ ಸರ್ಕಾರಿ ಕನ್ನಡ ಶಾಲೆಗಳ ವ್ಯವಸ್ಥೆಯನ್ನು ಸರ್ಕಾರ ರೂಪಿಸಿದೆ. ಆದರೆ ಅಂತಹ ಶಾಲೆಗಳೇ ಮುರಿದು ಬೀಳುವ ಸ್ಥಿತಿಗೆ ಬಂದರೆ ಅದನ್ನು ಸರಿಪಡಿಸಬೇಕಿರುವುದು ಸರ್ಕಾರದ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವರು ಕೂಡಲೇ ಇತ್ತ ಕಡೆ ಗಮನ ಹರಿಸಿ ಮಕ್ಕಳ ಹಿತದೃಷ್ಟಿಯನ್ನು ಕಾಯಬೇಕು ಅನ್ನುವುದು ನ್ಯೂಸ್ ನಾಟೌಟ್ ಕಳಕಳಿಯಾಗಿದೆ.