ನ್ಯೂಸ್ ನಾಟೌಟ್ : ಹಳೇ ದ್ವೇಷದ ಹಿನ್ನೆಲೆ ಯುವಕನೋರ್ವನನ್ನು ಕೊಲೆ ಮಾಡಿರುವ ದಾರುಣ ಘಟನೆ ಮಡಿಕೇರಿ ಸಮೀಪ ವರದಿಯಾಗಿದೆ. ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpet) ತಾಲೂಕಿನ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿ ನಡೆದಿದೆ.
ಕ್ರಿಸ್ಟಲ್ (28) ಹತ್ಯೆಯಾದ ದುರ್ದೈವಿ ಎಂದು ತಿಳಿದು ಬಂದಿದೆ. ಗುರುವಾರ ರಾತ್ರಿ ಸಿದ್ದಾಪುರ ಗ್ರಾಮದ ಪಾಲಿಬೆಟ್ಟ ರಸ್ತೆಯಲ್ಲಿರುವ ಬಾರ್ವೊಂದರಲ್ಲಿ (Bar) ಕ್ರಿಸ್ಟಲ್ ಸ್ನೇಹಿತರು ಹಾಗೂ ರಂಜಿತ್ ಸ್ನೇಹಿತರು ಇಬ್ಬರು ಒಂದೇ ಬಾರಿನಲ್ಲಿ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭ ರಂಜಿತ್ ಹಾಗೂ ಕ್ರಿಸ್ಟಲ್ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ ಎಂದು ತಿಳಿದು ಬಂದಿದೆ.
ಈ ಗಲಾಟೆಯನ್ನು ನೆರೆದವರು ತಡೆಯುವ ಪ್ರಯತ್ನ ಮಾಡಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ.ಕೂಡಲೇ ಬಾರ್ ಮ್ಯಾನೇಜರ್ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಸ್ಥಳಕ್ಕೆ ಆಗಮಿಸುವ ವೇಳೆ ಗಲಾಟೆ ಮತ್ತಷ್ಟು ಜೋರಾಗಿದೆ. ಕ್ರಿಸ್ಟಲ್ ತಂಡ ಹಾಗೂ ರಂಜಿತ್ ತಂಡದ ಯುವಕರು ಇನ್ನಷ್ಟು ಗಲಾಟೆ ಮಾಡಿಕೊಂಡು ಬಾರ್ನ ಶೌಚಾಲಯದ ಬಾಗಿಲು ಮುರಿದಿದ್ದಾರೆ ಎನ್ನಲಾಗಿದೆ.
ಬಳಿಕ ಪೊಲೀಸರು ಕ್ರಿಸ್ಟಲ್ನ ಜೊತೆಗಿದ್ದವನನ್ನು ಹಾಗೂ ಮತ್ತೊಬ್ಬರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ.ಬಳಿಕ ಗಲಾಟೆ ಮಾಡಿದ ರಂಜಿತ್ ಹಾಗೂ ಕ್ರಿಸ್ಟಲ್ ಇಬ್ಬರಿಗೂ ಸ್ಥಳದಲ್ಲೇ ಬುದ್ದಿವಾದ ಹೇಳಿ ಮನೆಗೆ ಹೋಗುವಂತೆಯೂ ತಿಳಿಸಿದ್ದರು.ಅಲ್ಲಿಗೆ ಗಲಾಟೆ ಒಂದು ಹಂತಕ್ಕೆ ನಿಂತಿತ್ತು.
ಆದರೆ ಮಾರನೇ ದಿನ ಅದೇನಾಗಿತ್ತೋ ಏನೋ .. ಶುಕ್ರವಾರ ಬೆಳಗ್ಗೆ ಬಾರ್ನಲ್ಲಿ ಗಲಾಟೆ ಮಾಡಿಕೊಂಡಿದ್ದ ಕ್ರಿಸ್ಟಲ್ (28) ಮೃತದೇಹ ಪಾಲಿಬೆಟ್ಟ ರಸ್ತೆಯಲ್ಲಿ ಗೋಚರಿಸಿದೆ. ಯುವಕನ ಮರ್ಮಾಂಗಕ್ಕೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.ಈ ಘಟನೆ ಕೇಳಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಸದ್ಯ ಸಿದ್ದಾಪುರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ವಿವರಗಳನ್ನು ಪಡೆಯುತ್ತಿದ್ದಂತೆ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ಮೂರು ತಿಂಗಳ ಹಿಂದೆಯೇ ಕ್ರಿಸ್ಟಲ್ ಹಾಗೂ ರಂಜಿತ್ ತಂಡದ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಏರ್ಪಟ್ಟಿತ್ತು ಎನ್ನಲಾಗಿದೆ. ಇಬ್ಬರ ನಡುವೆ ನಡೆದ ಗಲಾಟೆ ನ್ಯಾಯಾಲಯದ ಮೆಟ್ಟಿಲನ್ನು ಕೂಡ ಏರಿತ್ತು. ಗುರುವಾರವೂ ಹಳೆಯ ಗಲಾಟೆಗೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ವಿಚಾರಣೆಯನ್ನು ಮುಗಿಸಿಕೊಂಡು ಬಂದ ಇಬ್ಬರೂ ತಮ್ಮ ಸ್ನೇಹಿತರೊಂದಿಗೆ ರಾತ್ರಿ ಬಾರ್ನಲ್ಲಿ ಮುಖಾಮುಖಿ ಭೇಟಿಯಾಗಿ ಮತ್ತೊಮ್ಮೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ನಂತರ ಪೊಲೀಸರು ಬಂದು ಕ್ರಿಸ್ಟಲ್ನ ಜೊತೆಯಲ್ಲಿದ್ದ ಯುವಕರನ್ನು ಕರೆದುಕೊಂಡು ಹೋಗಿ ಕ್ರಿಸ್ಟಲ್ನನ್ನು ಮನೆಗೆ ಹೋಗುವಂತೆ ಹೇಳಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ವೇಳೆ ರಾತ್ರಿ ಮತ್ತೊಮ್ಮೆ ರಸ್ತೆ ಮಧ್ಯದಲ್ಲೇ ಗಲಾಟೆ ನಡೆದು ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಮನೆ ಮಗನನ್ನು ಕಳೆದುಕೊಂಡ ಪೋಷಕರು ಇದೀಗ ಕಣ್ಣೀರಲ್ಲಿ ದಿನದೂಡುವಂತಾಗಿದೆ.