ನ್ಯೂಸ್ ನಾಟೌಟ್:ಚಿಕ್ಕ ಮಕ್ಕಳನ್ನು ಎಷ್ಟೇ ಕಾಳಜಿವಹಿಸಿದರೂ ಕಡಿಮೆಯೇ.ಏಕೆಂದರೆ ಕಣ್ಣು ಮುಚ್ಚೋದ್ರೊಳಗೆ ಏನಾದರೂ ಅವಾಂತರಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ.ಅದರಲ್ಲೂ ಇಬ್ಬರು ಮೂವರು ಮಕ್ಕಳಿದ್ರೆ ಇನ್ನೂ ಜಾಗರೂಕತೆಯಿಂದ ನೋಡಿಕೊಳ್ಳಬೇಕಾಗುತ್ತದೆ.
ಇದಕ್ಕೆ ಸಂಬಂಧ ಪಟ್ಟ ಹಾಗೆ ಘಟನೆಯೊಂದು ನಡೆದಿದೆ.2 ವರ್ಷ ಪ್ರಾಯದ ಅಕ್ಕ ಚಾಕ್ಲೇಟ್ ಎಂದು ಪ್ಯಾಂಟ್ ಬಟನ್ ನ್ನು 2 ತಿಂಗಳ ಮಗುವಿಗೆ ಕೊಟ್ಟಿದ್ದಾಳೆ.ಇದನ್ನು ಮಗು ನುಂಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.ಉತ್ತರ ಕನ್ನಡ ಜಿಲ್ಲೆ ಭಟ್ಕಳ ನಗರದ ರಂಗೀಕಟ್ಟೆ ನಿವಾಸಿ ಪಾಲಿಷ್ ಕಮಲ ಕಿಶೋರ ಪುತ್ರಿ ಅಮೃತ (2 ತಿಂಗಳು) ಬಟನ್ ನುಂಗಿದ್ದ ಹಸುಗೂಸು ಎಂದು ತಿಳಿದು ಬಂದಿದೆ.
2 ವರ್ಷದ ನಮೃತಾ ಆಟವಾಡುತ್ತಾ ಚಾಕ್ಲೇಟ್ ಎಂದು ಪ್ಯಾಂಟ್ ಬಟನ್ ಅನ್ನು ಅಮೃತಾಳಿಗೆ ಕೊಟ್ಟಿದ್ದಾಳೆ ಎನ್ನಲಾಗಿದ್ದು, ಅಂತೆಯೇ ಏನೂ ಅರಿಯದ ಮುಗ್ಧ ಕಂದಮ್ಮ ಅದನ್ನು ನುಂಗಿದೆ. ಪರಿಣಾಮ ಮಗುವಿಗೆ ಉಸಿರಾಡಲು ಕಷ್ಟವಾಗಿದ್ದು,ಇದನ್ನರಿತ ಪೊಷಕರು ಗಾಬರಿಗೊಂಡಿದ್ದಾರೆ.
ಇತ್ತ ಉಸಿರಾಡಲು ಒದ್ದಾಡುತ್ತಿದ್ದ ಮಗುವನ್ನು ಪೋಷಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ವೈದ್ಯರ ಬಳಿ ಎಲ್ಲವನ್ನು ಹೇಳಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ.ಸದ್ಯ ವೈದ್ಯರ ಯಶಸ್ವಿ ಚಿಕಿತ್ಸೆಯಿಂದ ಮಗು ಪ್ರಾಣಾಪಾಯದಿಂದ ಪಾರಾಗಿದೆ.ಸರ್ಕಾರಿ ಆಸ್ಪತ್ರೆಯ ಇಎನ್ಟಿ ತಜ್ಞ ಡಾ. ಸತೀಶ್ ನೇತೃತ್ವದ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ ನಡೆದಿದೆ. ಕೊಳವೆ ಮೂಲಕ ಬಟನ್ ಹೊರ ತೆಗೆದು ಹಸುಳೆಯ ಜೀವವನ್ನು ವೈದ್ಯರು ಉಳಿಸಿ ದೇವರಾಗಿದ್ದಾರೆ.