ನ್ಯೂಸ್ ನಾಟೌಟ್ : ಹದಿನಾಲ್ಕು ಅಥವಾ ಹದಿನೈದು ವರ್ಷದಲ್ಲಿ ಮಕ್ಕಳು 9 ನೇ ತರಗತಿ ಓದುತ್ತಿದ್ದಾರೆ. ಆದರೆ ಮಿಜೋರಾಂನಲ್ಲಿ 78 ವರ್ಷ ವಯಸ್ಸಿನ 9ನೇ ತರಗತಿ ಓದುತ್ತಿರುವ ವ್ಯಕ್ತಿಯೊಬ್ಬರಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿರುವ ಈ ಅಜ್ಜನ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮಿಜೋರಾಂನ ಚಂಘೈ ಜಿಲ್ಲೆಯ ಹ್ರುಯಿಕಾವ್ನ್ ಗ್ರಾಮದಲ್ಲಿರುವ ಲಾಲ್ರಿಂಗ್ಥರಾ ಪ್ರತಿ ದಿನ ತನ್ನ ಮನೆಯಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ಶಾಲೆಗೆ ಪ್ರಯಾಣ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳಂತೆಯೇ ಸಮವಸ್ತ್ರ ಧರಿಸಿಕೊಂಡು, ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಶಿಸ್ತಿನಿಂದ ಶಾಲೆಗೆ ಹೋಗುತ್ತಾರೆ. ಅಲ್ಲಿ ಶಿಕ್ಷಕರು ಹೇಳಿಕೊಡುವ ಪಾಠವನ್ನು ಕಲಿಯುವ ಅವರು, ಮನೆಗೆ ಬಂದು ಹೋಮ್ ವರ್ಕ್ ಅನ್ನೂ ಮಾಡಿ, ಅದನ್ನು ಮಾರನೇ ದಿನ ಶಿಕ್ಷಕರಿಗೆ ತೋರಿಸುತ್ತಾರೆ ಎನ್ನುತ್ತಾರೆ ಅಲ್ಲಿನ ಶಿಕ್ಷಕರು.
78ರ ವಯಸ್ಸಿನ ಲಾಲ್ರಿಂಗ್ಥರಾ ಅವರು ಚಿಕ್ಕ ವಯಸ್ಸಿನಲ್ಲಿ ಸಾಕಷ್ಟು ಕಷ್ಟ ಕಂಡಿದ್ದರಂತೆ. 1945ರಲ್ಲಿ ಜನಿಸಿದ ಅವರು 2ನೇ ತರಗತಿಯಲ್ಲಿದ್ದಾಗ ತಂದೆ ತೀರಿಕೊಂಡಿದ್ದರಿಂದಾಗಿ ಶಾಲೆ ಬಿಡಬೇಕಾಗಿ ಬಂದಿತಂತೆ. ಶಾಲೆ ಬಿಟ್ಟ ಅವರು ಅಮ್ಮನೊಂದಿಗೆ ಗದ್ದೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸಲು ಕಲಿತುಕೊಂಡಿದ್ದಾರೆ. ಅವರಿಗೆ ಮಿಜೋರಾಂನ ಭಾಷೆಯನ್ನು ಓದಲು, ಬರೆಯಲು ಬರುತ್ತದೆ. ಆದರೆ ಈಗ ಟಿವಿಗಳಲ್ಲಿ ಎಲ್ಲೆಡೆ ಹೆಚ್ಚಾಗಿ ಇಂಗ್ಲಿಷ್ ಪದಗಳ ಬಳಕೆಯಾಗುತ್ತಿರುವುದರಿಂದ ಅದು ಅವರಿಗೆ ಗೊಂದಲವನ್ನುಂಟು ಮಾಡುತ್ತದೆಯಂತೆ. ಹಾಗಾಗಿ ಇಂಗ್ಲಿಷ್ ಕಲಿಯಬೇಕು ಎನ್ನುವ ಕಾರಣಕ್ಕೇ ಅವರು ಪ್ರೌಢಶಾಲೆಯಲ್ಲಿ 9ನೇ ತರಗತಿಗೆ ಸೇರ್ಪಡೆಗೊಂಡಿದ್ದಾರೆ.
ಇದಷ್ಟೇ ಅಲ್ಲ. ಅವರು ಈ ಹಿಂದೆ 2018ರಲ್ಲಿ ಹತ್ತಿರದ ನ್ಯೂ ಹ್ರುಯಿಕಾನ್ ಮಾಧ್ಯಮಿಕ ಶಾಲೆಯಲ್ಲಿ 5ನೇ ತರಗತಿ ಸೇರಿಕೊಂಡಿದ್ದರು. ಆ ವಿಚಾರ ಕೂಡ ಎಲ್ಲೆಡೆ ಭಾರೀ ಸುದ್ದಿಯಾಗಿತ್ತು.